ದಾವಣಗೆರೆ ಸರ್ಕೀಟ್ ಹೌಸ್ ಪಕ್ಕದ ಜಾಗದಲ್ಲಿ ದಲಿತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಜಮಾಯಿಸಿದ್ದರು. ಅಲ್ಲಿದ್ದ ಎಲ್ಲರ ಮನದಲ್ಲಿ ಏನೋ ಒಂದು ಸಾರ್ಥಕತೆ ಸಾಧಿಸಿದ ಭಾವ ಮನಸ್ಸಿನಲ್ಲಿ ತುಂಬಿತ್ತು. ಇದಕ್ಕೆ ಕಾರಣವಾಗಿದ್ದು ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಬೇಡ್ಕರ್ ಭವನದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯ ಕಾರ್ಯಕ್ರಮ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನದ ಜಾಗದ ನಿಗದಿ ವಿವಾದಕ್ಕೆ ಸಂಬಂಧಿಸಿದಂತೆ ಹಲವುವರ್ಷಗಳಿಂದ ದಲಿತ ಸಂಘಟನೆಗಳು ಹೋರಾಟಗಾರರು ಮತ್ತು ಸ್ಥಳೀಯ ಜಿಲ್ಲಾಡಳಿತದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಅಂಬೇಡ್ಕರ್ ಭವನದ ನಿರ್ಮಾಣ ಕಾಮಗಾರಿ ಯಶಸ್ವಿಯಾಗಿ ಸುಖಾಂತ್ಯ ಕಂಡಿದೆ. ದಾವಣಗೆರೆ ಸರ್ಕಿಟ್ ಹೌಸ್ ಬಳಿಯ ಜಾಗನಿಗಧಿ ಮಾಡಿ ಅಂಬೇಡ್ಕರ್ ಭವನಕ್ಕೆ ಈಗಾಗಲೇ ಒದಗಿಸಲಾಗಿದ್ದ ಅನುದಾನ ಸೇರಿದಂತೆ ಮತ್ತಷ್ಟು ಅನುದಾನವನ್ನು ಒದಗಿಸಿ ಶಂಕುಸ್ಥಾಪನೆ ನೆರವೇರಿಸಿದ್ದು ದಲಿತ ಸಂಘಟನೆಗಳಲ್ಲಿ ಉತ್ಸಾಹದ ಮತ್ತು ಸಂತೋಷದ ಅಲೆ ಎಬ್ಬಿಸಿತ್ತು.
ಡಾ.ಅಂಬೇಡ್ಕರ್ ರವರ 134ನೇ ಜಯಂತಿಯ ದಿನವೇ ಸುಮಾರು ಇಪ್ಪತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನದ ಭೂಮಿ ಪೂಜೆ, ಶಂಕುಸ್ಥಾಪನೆಯನ್ನು ಮಧ್ಯಾಹ್ನ 2.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ್, “ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನದ ಭೂಮಿ ಪೂಜೆ ಇಂದು ನೆಡೆದಿದೆ. 2000 ಇಸವಿಯಲ್ಲೇ ಪ್ರಾರಂಭವಾಗಬೇಕಿತ್ತು. ದಲಿತ ಸಂಘಟನೆಗಳ ಮುಖಂಡರ ಮುಖಂಡ ಒಮ್ಮತವಿಲ್ಲದೆ ಮುಂದಕ್ಕೆ ಬಂದಿತ್ತು. ಡಾ.ಅಂಬೇಡ್ಕರ್ ಅವರ ಆಶಯದಂತೆ ದಲಿತ, ಹಿಂದುಳಿದ ವರ್ಗಗಳ ಮಕ್ಕಳಿಗೆ ಹಾಸ್ಟೆಲ್, ವಿಧ್ಯಾಭ್ಯಾಸ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ. ಪೌರಕಾರ್ಮಿಕರಿಗೆ ಖಾಯಂ ಮಾಡುವ ಕೆಲಸ ನೆಡೆಯುತ್ತಿದೆ. ಈ ಜಾಗ ಡಿಸಿಸಿ ಬ್ಯಾಂಕ್ ನವರಿಗೆ ಕಟ್ಟಡಕ್ಕೆ ನೀಡಲಾಗಿತ್ತು. ಆದರೆ ಅವರಿಗೆ ಬೇರೆ ಜಾಗ ಕೊಟ್ಟು ಅಂಬೇಡ್ಕರ್ ಭವನಕ್ಕೆ ಜಾಗ ಮರು ಮಂಜೂರು ಮಾಡಲಾಗಿದೆ. ಒಳ್ಳೆಯ ಗುತ್ತಿಗೆದಾರರಿಗೆ ಈ ಕೆಲಸ ವಹಿಸಲಾಗುವುದು. ಹಣದ ಕೊರತೆ ಇಲ್ಲ. ಉತ್ತಮ ಸುಸಜ್ಜಿತ ಭವನ ನಿರ್ಮಾಣಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಬದ್ದವಾಗಿದೆ. ಎಚ್. ಆಂಜನೇಯ ಸಚಿವರಾಗಿದ್ದಾಗ ಜಿಲ್ಲೆಯ ಬಹುತೇಕ ಕಡೆ ಸಮುದಾಯ ಭವನ ನಿರ್ಮಾಣಕ್ಕೆ ಉತ್ತಮ ಅನುದಾನ ಬಿಡುಗಡೆ ಮಾಡಿಸಿದ್ದೇವೆ. ಎಲ್ಲರೂ ಕೈಜೋಡಿಸಿ ಬೆಂಗಳೂರಿನಲ್ಲಿರುವಂತಹ ಉತ್ತಮ, ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸೋಣ” ಎಂದು ತಿಳಿಸಿದರು.

ಶಾಸಕ ಬಸವಂತಪ್ಪ ಮಾತನಾಡಿ,”ಬಹಳ ದಿನಗಳ ನಂತರ ಅಂಬೇಡ್ಕರ್ ಭವನ ನಿರ್ಮಾಣ ಸಂತೋಷದ ವಿಷಯ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣಕ್ಕೆ ಜಾಗ ದೊರೆತಿದೆ. ಇದಕ್ಕೆ ಕಾರಣರಾದ ಸಚಿವರು, ಸಂಘಟನೆಯ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆಗಳು. ಉತ್ತಮವಾದ ಅಂಬೇಡ್ಕರ್ ಭವನ ನಿರ್ಮಾಣ ಎಲ್ಲರ ಕನಸಾಗಿತ್ತು. ಬೆಂಗಳೂರು, ವಸಂತನಗರದ ರೀತಿ ಉತ್ತಮ ಭವನ ನಿರ್ಮಾಣವಾಗಬೇಕು. ಮುಖಂಡರಿಗೆ ಭವನ ನಿರ್ಮಾಣದ ಬಗ್ಗೆ ದೂರದೃಷ್ಟಿ ಬೇಕು. ಇದು ಸಮಾಜದ ಎಲ್ಲ ಸಮುದಾಯಗಳಿಗೆ ಉಪಯೋಗವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಭ್ರಮದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆ ಬಿಡುಗಡೆ.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಮಹಾ ನಗರ ಪಾಲಿಕೆ ಆಯುಕ್ತ ರೇಣುಕಾ, ಮುಖಂಡರಾದ ಡಿ ಬಸವರಾಜ್, ರವಿ ನಾರಾಯಣ್, ಮಲ್ಲೇಶ್, ಕುಂದುವಾಡ ಮಂಜುನಾಥ್, ಬಸವರಾಜು, ನೀಲಗಿರಿಯಪ್ಪ, ಮಲ್ಲಿಕಾರ್ಜುನ್, ಹನುಮಂತಪ್ಪ, ಆವರಗೆರೆ ಉಮೇಶ್, ದುಗ್ಗಪ್ಪ, ಹಾಲೇಶ್, ಮಲ್ಲಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಹಾಜರಿದ್ದರು. ಹೆಗ್ಗರೆ ರಂಗಪ್ಪ, ಐರಣಿ ಚಂದ್ರು ಕ್ರಾಂತಿಗೀತೆ ಹಾಡಿದರು.