ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಉಮಾ ಪ್ರಶಾಂತ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ, ವಾಗ್ದಾಳಿ ನಡೆಸಿದ್ದ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಬಿ.ಪಿ.ಹರೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಎಸ್ಪಿಯವರನ್ನು ನಾಯಿಗೆ ಹೋಲಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಶಾಸಕರ ವಿರುದ್ದ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಶಾಸಕರಿಗೆ ಬೆಲೆಯೇ ಕೊಡುವುದಿಲ್ಲ. ಶಾಸಕರು ಸಭೆಯಲ್ಲಿ ಇದ್ದರೆ ಮುಖ ತಿರುಗಿಸಿ ಕೂರುತ್ತಾರೆ. ಗಂಟೆಗಟ್ಟಲೆ ಶಾಮನೂರು ಮನೆಯ ಬಾಗಿಲು ಕಾಯುತ್ತಾರೆ. ಎಸ್ಪಿ ಶಾಮನೂರು ಕುಟುಂಬದ ಪಮೆರಿಯನ್ ನಾಯಿಯಂತೆ ವರ್ತಿಸುತ್ತಾರೆ. ಇವರಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನ್ನಿಸುತ್ತದೆ. ಎಲ್ಲಾ ಜನಪ್ರತಿನಿಧಿಗಳನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಇಲ್ಲ. ಈ ಅಧಿಕಾರ ತಾತ್ಕಾಲಿಕ ಅನ್ನುವುದನ್ನು ಎಸ್ಪಿ ಅರಿತುಕೊಳ್ಳಬೇಕು” ಎಂದು ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಟೀಕಿಸಿದ್ದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಲಿತ, ಬೇಡ ಹಿಂದುಳಿದ ಕುಟುಂಬಗಳಿಗೆ ನಿವೇಶನ ಹಂಚಿಕೆಗೆ ಆಗ್ರಹಿಸಿ ದಸಂಸ ತಮಟೆ ಚಳುವಳಿ, ಪಾದಯಾತ್ರೆ
ಎಸ್ಪಿ ಉಮಾ ಪ್ರಶಾಂತ್ ದೂರು ನೀಡಿದ ಹಿನ್ನೆಲೆಯಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್ಎಸ್ ಕಾಯ್ದೆ ಕಾಲಂ 79, ಕಾಲಂ 132ರ ಅಡಿಯಲ್ಲಿ (ಮಹಿಳೆಯ ಘನತೆಗೆ ಕುಂದುಂಟು ಮಾಡುವುದು, ಕರ್ತವ್ಯಕ್ಕೆ ಅಡ್ಡಿ) ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.