ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ನಿಯಮಬದ್ದವಾಗಿ ನಡೆಸುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿರುವ ಅನುಮಾನ ಇರುವುದರಿಂದ ಲೋಕಾಯುಕ್ತದಲ್ಲಿ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ತಿಳಿಸಿದರು.
ಗುರುವಾರ ದಾವಣಗೆರೆ ತಾಲ್ಲೂಕಿನ ಕುರ್ಕಿ ಬಳಿಯ ಹಿರೇತೊಗಲೇರಿ ಮತ್ತು ಹೆಬ್ಬಾಳ ಬಳಿಯ ಪಂಜೇನಹಳ್ಳಿ ಅರಣ್ಯದಂಚಿನಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ವೀಕ್ಷಣೆ ಮಾಡಿದರು. ಕುರ್ಕಿ ಬಳಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದ್ದು ಇಲ್ಲಿ 7 ಕ್ಕೆ ಅನುಮತಿ ನೀಡಲಾದ ಪ್ರದೇಶಕ್ಕಿಂತಲೂ ಹೆಚ್ಚು ಒತ್ತುವರಿ ಮಾಡಿಕೊಳ್ಳಲಾಗಿದೆ. ಬಫರ್ ಝೋನ್ ಬಿಟ್ಟು ಗಣಿಗಾರಿಕೆ ಮಾಡಬೇಕು. ಆದರೆ ಗಡಿಭಾಗಕ್ಕಿಂತಲೂ ಹೆಚ್ಚುವರಿಯಾಗಿ ಒತ್ತುವರಿಯಾಗಿರುವುದು ಕಂಡು ಬಂದಿದೆ. ಬಫರ್ ಝೋನ್ ಇಲ್ಲದೇ ಸಾಕಷ್ಟು ಆಳವಾಗಿ ಗಣಿಗಾರಿಕೆ ಮಾಡುವುದರಿಂದ ಮತ್ತು ನಿಯಮದನ್ವಯ ಇದಕ್ಕೆ ಯಾವುದೇ ಮಿತಿ ಇಲ್ಲದಿರುವುದರಿಂದ ಪಕ್ಕದಲ್ಲಿನ ಭೂಮಿಯು ಕುಸಿಯುತ್ತದೆ. ಇದನ್ನು ಮುಚ್ಚುವುದು ಹೇಗೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಕೂಡ ಮಾಡಲಾಗುತ್ತಿದೆ, ಆದರೆ ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿನ ಮನೆಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಗಣಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸಹ ಪರಿಶೀಲನೆ ನಡೆಸಬೇಕು ಎಂದರು.
ಗಣಿಗಾರಿಕೆಯನ್ನು ನಿಯಮಗಳನ್ವಯ ನಡೆಸಿ. ಆದರೆ ನಿಯಮ ಉಲ್ಲಂಘಿಸಿದರೆ ಕಠಿಣಕ್ರಮ ಅನಿವಾರ್ಯವಾಗುತ್ತದೆ. ಇದನ್ನು ಅಧಿಕಾರಿಗಳು ತಡೆಯಬೇಕು, ಅಂತಹ ಗಣಿಗಾರಿಕೆಗೆ ನೀಡಿದ ಗುತ್ತಿಗೆ ರದ್ದುಪಡಿಸಬೇಕೆಂದು ಗಣಿ ಮಾಲೀಕರಿಗೆ ಎಚ್ಚರಿಸಿದರು.
ಹೆಬ್ಬಾಳ ಬಳಿಯ ಪಂಜೇನಹಳ್ಳಿಗೆ ಭೇಟಿ ನೀಡಿ ಅಲ್ಲಿ ಅರಣ್ಯದಂಚಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆ ಮಾಡಿದರು. ಇಲ್ಲಿ ಕ್ವಾರಿಯನ್ನು ನಿಲ್ಲಿಸಲಾಗಿದ್ದು ಕ್ರಷರ್ ಮಾತ್ರ ನಡೆಯುತ್ತಿದೆ. ಆದರೆ ಗಣಿಗಾರಿಕೆ ನಡೆಸಿದ ಸ್ಥಳವನ್ನು ಮಣ್ಣಿನಿಂದ ಮುಚ್ಚಿ ಗಿಡ, ಮರಗಳನ್ನು ಹಾಕಬೇಕಾಗಿದೆ. ಗಣಿಗಾರಿಕೆ ಮಾಡುವಾಗ ಆಳದವರೆಗೆ ತೆಗೆದಿರುವುದನ್ನು ಪುನರ್ ನಿರ್ಮಾಣ ಮಾಡಬೇಕೆಂಬ ಷರತ್ತು ಇರುತ್ತದೆ. ಆದರೆ ಅಧಿಕಾರಿಗಳು ತಮ್ಮ ಕೆಲಸ ಮಾಡುವುದಿಲ್ಲ, ಬೇರೆ ಕಡೆಗೆ ಅಧಿಕಾರಿಗಳ ವರ್ಗಾವಣೆಯಾಗಿ ಹೋಗುತ್ತಾರೆ. ಕಡ್ಡಾಯವಾಗಿ ಮೈನಿಂಗ್ ಮಾಲೀಕರಿಂದ ಈ ಕೆಲಸ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾಶ್ಮೀರದ ಪ್ರವಾಸಿಗರ ಮೇಲಿನ ಉಗ್ರ ಕೃತ್ಯಕ್ಕೆ ಚನ್ನಗಿರಿ ಯುವ ಕಾಂಗ್ರೆಸ್ ಖಂಡನೆ, ಶಿಕ್ಷೆಗೆ ಆಗ್ರಹ.
ಈ ವೇಳೆ ಉಪಲೋಕಾಯುಕ್ತರೊಂದಿಗೆ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಉಪನಿಬಂಧಕರಾದ ಅರವಿಂದ್ ಎನ್.ವಿ, ಮಿಲನ ವಿ.ಎನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಎಂ.ಕರಣ್ಣನವರ, ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌಲಾಪೂರೆ, ಹಿರಿಯ ಭೂ ವಿಜ್ಞಾನಿ ರಶ್ಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.