ಕೆಚ್ಚೇನಹಳ್ಳಿ ಗ್ರಾಮ ಸೇರಿದಂತೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಾದ್ಯಂತ ಹಲವು ಹಳ್ಳಿಗಳ ಸಣ್ಣ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅಡೆತಡೆಯಿಲ್ಲದೆ ನಡೆಯುತ್ತಿದೆ. ಇದರಿಂದ ನಮ್ಮ ಸಂಸಾರಗಳು ಬೀದಿಗೆ ಬೀಳುತ್ತಿವೆ’ ಎಂದು ಕೆಚ್ಚೇನಹಳ್ಳಿ ಗ್ರಾಮದ ಮಹಿಳೆಯರು ದಸಂಸ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಗಳೂರು ತಾಲೂಕು ಕಚೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಕೆಚ್ಚೆನಹಳ್ಳಿ ಗ್ರಾಮದ ಮಹಿಳೆಯರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆ ನಾಗಮ್ಮ ಮಾತನಾಡಿ, “ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಮನೆ ಮತ್ತು ಸಣ್ಣ ಸಣ್ಣ ಅಂಗಡಿಗಳಲ್ಲಿ ನಿರ್ಭಯವಾಗಿ, ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಪ್ರತಿ ದಿನ ಜಗಳಗಳು, ಜಾತಿ ಸಂಘರ್ಷ, ಕೋಮುಗಲಭೆ, ಅಶಾಂತಿ ಮೂಡಿದ್ದು, ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ.
“ಕುಡುಕರು, ಮದ್ಯ ವ್ಯಸನಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ಮಕ್ಕಳು ನಿರ್ಭಯವಾಗಿ ಓಡಾಡುವುದು ಕಷ್ಟವಾಗಿದೆ. ಕುಟುಂಬದಲ್ಲಿ ನೆಮ್ಮದಿ ಹಾಳಾಗಿದೆ. ಕೂಡಲೇ ಆಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಸ್ಥಳೀಯ ಮಹಿಳೆ ಗೌರಮ್ಮ ಮಾತನಾಡಿ, “ಮನೆಯಲ್ಲಿ ಹೆಂಗಸರು, ಮಕ್ಕಳ ಆಭರಣ, ವಡವೆ, ತಾಳಿಯನ್ನು ಸಹ ಅಡವಿಟ್ಟು, ಮಾರಾಟ ಮಾಡಿ ಕುಡಿಯುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು, ಚಿಕ್ಕಮಕ್ಕಳು ಸಹ ಮದ್ಯದ ಚಟಕ್ಕೆ ದಾಸರಾಗುತ್ತಿದ್ದು, ಪ್ರತಿನಿತ್ಯಮನೆಯಲ್ಲಿ ಜಗಳವಾಗುತ್ತಿವೆ. ಗಂಡಂದಿರು ಕುಡಿದು ಬಂದು ಹೆಂಡತಿಯರನ್ನು ನಿಂದಿಸುವುದು, ಹೊಡೆಯುವುದು ನೆಡೆಯುತ್ತಿದೆ. ನಮ್ಮ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟವಾಗುತ್ತಿದ್ದು, ಇದನ್ನು ಸಂಭಂದಿಸಿದ ಅಧಿಕಾರಿಗಳು ತಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ಮನನೊಂದ ತಂದೆ.ತಂದೆ..
ಈ ಸಂದರ್ಭದಲ್ಲಿ ದಸಂಸದ ಸತೀಶ್ ಮಲೆಮಾಚಿಕೆರೆ, ಕೆಚ್ಚೇನಹಳ್ಳಿ ಕೃಷ್ಣಮೂರ್ತಿ, ಗ್ರಾಪಂ ಸದಸ್ಯೆ ರೇಣುಕಮ್ಮ, ರಾಕೇಶ್, ನಾಗವ್ವ, ತಾಯಕ್ಕ, ಹನುಮಕ್ಕ, ಹಾಲಮ್ಮ, ಶಾಂತಮ್ಮ, ಕೆಳಗೋಟೆ ಬಸಮ್ಮ, ಸುಧಾ ಸೇರಿದಂತೆ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.