ಇತ್ತೀಚೆಗೆ ಉಪಚುನಾವಣೆಯ ರಾಜಕಾರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಕೇಳಿಬಂದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಿಂದ ದೂರ ಉಳಿದಿದ್ದ ಸ್ಥಳೀಯ ಮುಸ್ಲಿಂ ಸಮುದಾಯದ ನಾಯಕ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಅವರನ್ನು ‘ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಮಾಡಲಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಎಪ್ರಿಲ್ 9ರಂದು ಮತದಾನ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಅಬ್ದುಲ್ ಜಬ್ಬಾರ್ ಸಾಬ್, ನಜೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ನಾಯಕರು ಪಟ್ಟು ಹಿಡಿದಿದ್ದರು. ಆದರೆ ಸಂಪ್ರದಾಯ ಹೆಸರಿನಲ್ಲಿ ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ ಶಾಮನೂರುಗೆ ಟಿಕೆಟ್ ಘೋಷಿಸಿತ್ತು.
ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಕೆಲ ಮುಖಂಡರು ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪರ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಅಲ್ಲದೆ ಕೆಲವು ಪಕ್ಷೇತರ ಹಾಗೂ ಇತರ ಅಭ್ಯರ್ಥಿಗಳಿಗೆ ಹಣ ನೀಡಿ ಬೆಂಬಲಿಸಿರುವ ಆರೋಪ ಕೇಳಿಬಂದಿದ್ದು, ನಾಯಕರ ವರದಿ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಕ್ರಮ ಕೈಗೊಂಡಿತ್ತು.
ಮೊದಲಿಗೆ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ “ನನ್ನನ್ನು ಚುನಾವಣೆಯಲ್ಲಿ ಅಭ್ಯರ್ಥಿ ಮತ್ತು ಸಚಿವರು ಸೇರಿದಂತೆ ಯಾರು ಕೂಡ ಕರೆದಿಲ್ಲ” ಎಂದು ಪ್ರತಿಕ್ರಿಯಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹರಿಹರ ಹರಪೀಠದ ವಚನಾನಂದ ಶ್ರೀ ಉಚ್ಛಾಟನೆ; ಪಂಚಮಸಾಲಿ ಟ್ರಸ್ಟ್ ನಿರ್ಣಯ
ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಕೆಪಿಸಿಸಿ ಕಚೇರಿಯ ಪ್ರಕಟಣೆಯಲ್ಲಿ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಮಾಡದೆ ದೂರು ಉಳಿದಿದ್ದಾರೆ ಎನ್ನಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಎನ್ನುವ ಆರೋಪ ಹೊರಿಸಿ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.





