ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ನೇತೃತ್ವದಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೇವೆ ಸ್ಥಗಿತಗೊಳಿಸಿ ಜು.8ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಅರ್ನಿಷ್ಟಾವದಿ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ದಾವಣಗೆರೆ ಮಹಾನಗರ ಪಾಲಿಕೆಯ ಮೂರು ವಲಯ ಕಛೇರಿಗಳೂ ಸೇರಿದಂತೆ ಪಾಲಿಕೆಯ ನೌಕರರು ಸೇವೆಗೆ ಹಾಜರಾಗದೆ ಪ್ರತಿಭಟನೆ ನಡೆಸಿದರು. ಇದರಿಂದ ದಾವಣಗೆರೆಯಲ್ಲಿ ಜನರ ಪರದಾಟ ಕಂಡುಬಂದಿತು.
ದಾವಣಗೆರೆಯ 800 ನೌಕರರು ಸೇರಿ ರಾಜ್ಯದ 10 ಪಾಲಿಕೆಗಳ 15 ಸಾವಿರಕ್ಕೂ ಹೆಚ್ಚು ನೌಕರರು
ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನಗರಗಳ ಪೌರಾಡಳಿತ ಸೇವೆಯಿಲ್ಲದೇ ಜನ ಅನಾನುಕೂಲ ಅನುಭವಿಸುವಂತಾಗಿದೆ.
ಪಾಲಿಕೆ ನೌಕರರ ಮುಷ್ಕರಕ್ಕೆ ಪೌರಕಾರ್ಮಿಕರು ಸಹ ಬೆಂಬಲ ವ್ಯಕ್ತಪಡಿಸಿದ್ದು, ಸೇವೆ ಸ್ಥಗಿತಗೊಳಿಸಿ ಬೆಂಬಲ ವ್ಯಕ್ತಪಡಿಸಲಿರುವ ಕಾರಣ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತೆಯ ಕಾರ್ಯವೂ ಕೂಡ ಬಂದ್ ಆಗಿದೆ. ಸಾರ್ವಜನಿಕರ ದೈನಂದಿನ ಪಾಲಿಕೆ ವ್ಯವಹಾರ, ನೀರು ಸರಬರಾಜು ಸೇರಿದಂತೆ ಹಲವು ಸೇವೆಗಳಲ್ಲಿ ಕೂಡ ವ್ಯತ್ಯಯ ಉಂಟಾಗಲಿದೆ.
“7 ನೇ ವೇತನ ಆಯೋಗದ ಸೌಲಭ್ಯವನ್ನು ಮಹಾನಗರ ಪಾಲಿಕೆ ನೌಕರರಿಗೆ ಯಥಾವತ್ತಾಗಿ ವಿಸ್ತರಿಸಿ, ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ರಾಜ್ಯ ಹಣಕಾಸು ಆಯೋಗ ನೀಡುವ ವೇತನದ ಅನುದಾನದಿಂದಲೇ ಶೇಕಡ 100 ರಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು. ಕರ್ನಾಟಕ ಮಹಾನಗರ ಪಾಲಿಕೆಗಳು (ಅಧಿಕಾರಿಗಳು ಮತ್ತು ಸಿಬ್ಬಂದಿಗಳ) ಸಾಮಾನ್ಯ ನೇಮಕಾತಿ ನಿಯಮಗಳು 2011 ಕ್ಕೆ ಸಮಗ್ರ ತಿದ್ದುಪಡಿ ಮಾಡಿ ಶೀಘ್ರವಾಗಿ ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು”
“ಕೆ.ಜಿ.ಐ.ಡಿ, ಜಿ.ಐ.ಎಸ್ (ಗ್ರೂಪ್ ಇನ್ಸೂರೆನ್ಸ್) ಹಾಗೂ ಜಿ.ಪಿ.ಎಫ್ ಸೌಲಭ್ಯ ಮತ್ತು ಜ್ಯೋತಿ ಸಂಜೀವಿನಿ ಯೋಜನೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನೌಕರರಿಗೆ ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರಿಗೆ ವಿವಿಧ ವೃಂದದ ಹುದ್ದೆಗಳಿಗೆ ಮುಂಬಡ್ತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಫಸಲ್ ಭೀಮಾ ಯೋಜನೆಯಲ್ಲಿ ಬೆಳೆಗಳಿಗೆ ವಿಮೆ ಪಡೆಯಲು ರೈತರಿಗೆ ಆಹ್ವಾನ
“ರಾಜ್ಯದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆ.ಎಂ.ಸಿ ಆಕ್ಟ್ 1976 ಸೆಕ್ಷನ್ 83 ರಂತೆ ಹಾಗೂ ಕೆ.ಎಂ.ಎ.ಎಸ್ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆ.ಎಂ.ಎ.ಎಸ್ ಹುದ್ದೆಗೆ ಮುಂಬಡ್ತಿ ನೀಡಲು ಅವಕಾಶವಿದ್ದರೂ ಸಹ ಕಳೆದ 50 ವರ್ಷಗಳಿಂದಲೂ ಕೆ.ಎಂ.ವಿ.ಎಸ್ ಹುದ್ದೆಗಳಿಗೆ ಮುಂಬಡ್ತಿ ನೀಡಿರುವುದಿಲ್ಲ. ಈ ಸಂಬಂಧ ರಾಜ್ಯ ಉಚ್ಚನ್ಯಾಯಾಲಯವು ತೀರ್ಪು ನೀಡಲಾಗಿದ್ದರೂ ಸಹ 2022 ರ ಕೆ.ಎಂ.ಎ.ಎಸ್ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾರತಮ್ಯ ಉಂಟುಮಾಡಿರುವುದನ್ನು ಸರಿಪಡಿಸಬೇಕು” ಎನ್ನುವ ಬೇಡಿಕೆಗಳೊಂದಿಗೆ ಒತ್ತಾಯಿಸಿ ರಾಜ್ಯದ ಹತ್ತು ಮಹಾನಗರ ಪಾಲಿಕೆಯ ನೌಕರರು ಮುಷ್ಕರ ಆರಂಭಿಸಿದ್ದಾರೆ.