ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನಕ್ಕೆ ಭಾರತ ಸೇನೆಯು ತಕ್ಕ ಉತ್ತರ ನೀಡಿದ್ದು, ಶತ್ರು ರಾಷ್ಟ್ರದ ವಿರುದ್ಧ ಹೋರಾಡಲು ಯೋಧರಿಗೆ ಇನ್ನೂ ಶಕ್ತಿ ನೀಡಲು ಹಾಗೂ ಸುರಕ್ಷತೆಗೆ ಪ್ರಾರ್ಥಿಸಿ ದಾವಣಗೆರೆ ನಗರದ ದುರ್ಗಾಂಬಿಕಾ ದೇವಸ್ಥಾನ ಹಾಗೂ ಕಡಕ್ ಶಾ ವಲಿ ದರ್ಗಾದಲ್ಲಿ ದಾವಣಗೆರೆ ಜಿಲ್ಲಾ ಜವಾಹರ್ ಬಾಲ್ ಮಂಚ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಅವರು, “ಪಾಕಿಸ್ತಾನವು ಪದೇ ಪದೇ ಕಾಲು ಕರೆದು ಭಾರತವನ್ನು ಕೆಣಕುತ್ತಲೇ ಇತ್ತು. ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ಎಂದಿಗೂ ಕ್ಷಮಿಸಲು ಸಾದ್ಯವಿಲ್ಲ. 26 ಪ್ರವಾಸಿಗರ ಹತ್ಯೆಗೈದ ಭಯೋತ್ಪಾದಕರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಈ ಉಗ್ರರ ಹಿಂದಿರುವವರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಪಾಕಿಸ್ತಾನದ ಭಯೋತ್ಪಾದನಾ ನೆಲೆಗಳ ಮೇಲೆ ನುಗ್ಗಿ ಹೊಡೆದಿರುವ ಭಾರತವು ತಕ್ಕ ಉತ್ತರ ನೀಡುತ್ತಿದೆ” ಎಂದು ಸೇನೆಗೆ ಬೆಂಬಲಿಸಿದರು.

“ಪಾಕಿಸ್ತಾನದ ಎಲ್ಲಾ ಷಡ್ಯಂತ್ರ ಬಯಲು ಮಾಡುತ್ತಿರುವ ಭಾರತ ಸೇನೆಯು ನೆರೆರಾಷ್ಟ್ರದೊಳಗೆ ಕ್ಷಿಪಣಿ ದಾಳಿ ನಡೆಸಿ ಹೊಡೆದು ಹಾಕುತ್ತಿದೆ. ಪಾಕಿಸ್ತಾನದ ಡ್ರೋಣ್, ಕ್ಷಿಪಣಿಗಳ ಹೊಡೆದುರುಳಿಸಿದೆ. ಭಾರತ – ಪಾಕ್ ಗಡಿಯಲ್ಲಿ ಎರಡೂ ರಾಷ್ಟ್ರಗಳ ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಭಾರತದ ಯೋಧರಿಗೆ ಯಾವುದೇ ತೊಂದರೆ ಆಗದಿರಲಿ. ಭಾರತ ಸೇನೆಗೆ ಮತ್ತಷ್ಟು ಶಕ್ತಿ ನೀಡುವಂತೆ ದುರ್ಗಾಂಬಿಕಾ ದೇವಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಅದೇ ರೀತಿಯಲ್ಲಿ ಕಡಕ್ ಶಾ ವಲಿ ದರ್ಗಾದಲ್ಲಿ ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.
“ಭಾರತ ಸೇನೆಯು ವಿಶ್ವದಲ್ಲಿಯೇ ಶಕ್ತಿಶಾಲಿಯಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಭಯೋತ್ಪಾದನೆ ಮಟ್ಟ ಹಾಕಲು ದಿಟ್ಟ ಹೆಜ್ಜೆ ಇಟ್ಟಿರುವ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿವೆ. ಭಾರತದ ವಾಯುಸೇನೆ, ಭೂ ಸೇನೆ, ನೌಕಾ ಸೇನೆ ಪಾಕ್ ಗೆ ತಕ್ಕ ಪಾಠ ಕಲಿಸುವುದು ಖಚಿತ. ಈ ಕಾರ್ಯಾಚರಣೆಯಲ್ಲಿ ಹೋರಾಡುವವರಿಗೆ ಯಾವುದೇ ಸಮಸ್ಯೆಯಾಗದಿರಲಿ. ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಪಾಠ ಕಲಿಯುವವರೆಗೂ ದಾಳಿ ನಡೆಯಬೇಕು. ಉಗ್ರರ
ಸಂಪೂರ್ಣ ನಿರ್ನಾಮ ಮಾಡುವವರೆಗೆ ಆಪರೇಷನ್ ಸಿಂಧೂರ ನೆಡೆಯಲಿ” ಎಂದು ಹೇಳಿದರು.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, “ಪಹಲ್ಗಾಮ್ ನಲ್ಲಿ ದಾಳಿಗೆ ಪ್ರತೀಕಾರವಾಗಿ ಭಾರತವು ತೆಗೆದುಕೊಂಡಿರುವ ರಾಜತಾಂತ್ರಿಕ ನಡೆ, ಆಪರೇಷನ್ ಸಿಂಧೂರ, ಭಯೋತ್ಪಾದನಾ ಶಿಬಿರಗಳ ಧ್ವಂಸ ಪ್ರತೀಕಾರದ ಭಾಗ. ಹಿಂದೂ ಹೆಸರು ಕೇಳಿ ಹತ್ಯೆ ಮಾಡಿದ ಉಗ್ರರ ಕ್ಷಮಿಸಲು ಆಗದು. ಇಂಥ ಪೈಶಾಚಿಕ ಕೃತ್ಯ ಎಸಗಿದ ಮತ್ತು ಸಹಕರಿಸಿದ, ಬೆಂಬಲಿಸಿದ ಪಾಕಿಸ್ತಾನಕ್ಕೆ ಸರಿಯಾಗಿಯೇ ಭಾರತ ಪಾಠ ಕಲಿಸುತ್ತಿದೆ. ವಿಶ್ವದ ಭೂಪಟದಲ್ಲಿ ಪಾಕಿಸ್ತಾನ ಇಲ್ಲದಂತೆ ಮಾಡಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಣೇಹಳ್ಳಿ ತರಳಬಾಳು ಮಠದಲ್ಲಿ ಬಸವಾದಿ ಶರಣರ ವಚನಗಳ ರಾಜ್ಯ ಮಟ್ಟದ ಸ್ಪರ್ಧೆ.
ಈ ವೇಳೆ ಜವಾಹರ್ ಬಾಲ್ ಮಂಚ್ ಪದಾಧಿಕಾರಿಗಳಾದ ಕೆ. ಹೆಚ್. ಪ್ರೇಮಾ, ಶಿಲ್ಪಾ ಪರಶುರಾಮ್, ಯುವರಾಜ್, ಮಂಜುನಾಥ್, ಹರೀಶ್, ಅಕ್ಬರ್ ಬಾಷಾ, ಫಯಾಜ್ ಅಹ್ಮದ್, ಅಯೂಬ್ ಖಾನ್, ಇಮಾಮ್, ಗೌರವ್ ಮತ್ತಿತರರು ಹಾಜರಿದ್ದರು.