“ಪ್ರಸ್ತುತ 2025ರ ಆಯವ್ಯಯದಲ್ಲಿ (ಬಜೆಟ್) ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ಧತಿ ರದ್ದುಪಡಿಸಿ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿ ಜಾರಿಗೊಳಿಸದೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ” ಎಂದು ದಾವಣಗೆರೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪೌರಕಾರ್ಮಿಕರಂತೆ ತಮ್ಮನ್ನು ಕೂಡ ನೇರಪಾವತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ದಾವಣಗೆರೆ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಬೇಸರ ಹೊರಹಾಕಿದ ರಾಜ್ಯಾಧ್ಯಕ್ಷ ನಾಗನಗೌಡ,”ಕಾಂಗ್ರೆಸ್ ಸರಕಾರ ಕಳೆದ 2023ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಆರನೇ ಗ್ಯಾರಂಟಿ ನೀಡಿತ್ತು. ಆದರೆ ಈ ಬಜೆಟ್ನಲ್ಲೂ ಕೂಡ ಕಾಯಂಗೊಳಿಸದೆ ಭೇದಭಾವ ಮಾಡಿದೆ” ಎಂದು ಆರೋಪಿಸಿದರು.
“ಸರ್ಕಾರ ಪೌರಕಾರ್ಮಿಕರಲ್ಲಿ ತಾರತಮ್ಯ ಮಾಡಿದೆ. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಸದ ಚಾಲಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಸಾವಿರಾರು ನೌಕರರಿಗೆ ಗುತ್ತಿಗೆ ಪದ್ದತಿಯನ್ನು ಹೇರಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಹೊರಗುತ್ತಿಗೆ ನೌಕರರ ಸಂಘದ ತೀವ್ರ ಹೋರಾಟದ ಫಲವಾಗಿ ಈ ಬಾರಿಯ ಬಜೆಟ್‌ನಲ್ಲಿ ನೇರಪಾವತಿ ಘೋಷಣೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಹಣಕಾಸು ಇಲಾಖೆ ಸೂಚನೆ ನೀಡಿತ್ತು. ಅದರಂತೆ ನಗರಾಭಿವೃದ್ಧಿ ಇಲಾಖೆ ಅಗತ್ಯ ಪ್ರಸ್ತಾವನೆ ಸಲ್ಲಿಸಿದ್ದರು. ನೇರಪಾವತಿಗೆ ಒಳಪಡಿಸುವ ಬದಲು, ಗುತ್ತಿಗೆ ಏಜೆನ್ಸಿಗಳ ಲಾಭಿಗೆ ಮಣಿದಿರುವ ಕಾಂಗ್ರೆಸ್ ಸರಕಾರ ಹೊರಗುತ್ತಿಗೆ ನೌಕರರಿಗೆ ವಿಶ್ವಾಸ ದ್ರೋಹವೆಸಗಿದೆ” ಎಂದು ಕಿಡಿಕಾರಿದ್ದಾರೆ.
“ಈ ಕೂಡಲೇ ಸರ್ಕಾರ ಎಚ್ಚೆತ್ತು ಗುತ್ತಿಗೆ ಪದ್ದತಿ ರದ್ದುಗೊಳಿಸಿ ನೇರಪಾವತಿ ವ್ಯಾಪ್ತಿಗೆ ಹೊರಗುತ್ತಿಗೆ ನೌಕರರನ್ನು ತರಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕುಡಿಯುವ ನೀರು ಸ್ವಚ್ಚತೆ ಬಹಿಷ್ಕರಿಸಿ ಅನಿರ್ದಿಷ್ಟವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರ.
ಈ ವೇಳೆ ಮುಖಂಡರಾದ ದುಗ್ಗೇಶ್, ಕುಮಾರ್, ಬಸವರಾಜ್, ಸೇರಿದಂತೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.