ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 1913 ರಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಿದ ದಾವಣಗೆರೆಯ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ವಚನಾನುಷ್ಠಾನ ಪ್ರವಚನ ಉದ್ಘಾಟನಾ ಕಾರ್ಯಕ್ರಮ ಜುಲೈ 24ರಂದು ಗುರುವಾರ ಸಂಜೆ 6ಕ್ಕೆ ನಗರದ ದೊಡ್ಡಪೇಟೆಯ ಶ್ರೀ ವಿರಕಮಠದ ಬಸವಕೇಂದ್ರದಲ್ಲಿ ಆಯೋಜಿಸಲಾಗಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ “ಚಿತ್ರದುರ್ಗದ ಮುರುಘಾಮಠದ ಶೂನ್ಯ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣರ ಕೃಪಾರ್ಶೀವಾದದಿಂದ ಕಾರ್ಯಕ್ರಮ ನಡೆಸಲಾಗುತ್ತಿದ್ದು. ದಾವಣಗೆರೆಯ ವಿರಕ್ತ ಮಠದ ಚರಮೂರ್ತಿ ಡಾ.ಬಸವಪ್ರಭು ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಗದಗಿನ ಪಂಡಿತ್ ಪುಟ್ಟರಾಜಕವಿ ಗವಾಯಿಗಳವರ ಶಿಷ್ಯರಾದ ಬಿ.ಎಂ. ಪಂಚಾಕ್ಷರಿ ಶಾಸ್ತ್ರಿಗಳು ಪ್ರವಚನ ನೀಡಲಿದ್ದಾರೆ” ಎಂದು ತಿಳಿಸಿದರು.

“ವಚನಾನುಷ್ಠಾನ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಮುಖ್ಯ ಅತಿಥಿಗಳಾಗಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಎಂ.ಜಯಕುಮಾರ್, ಶ್ರೀಶಿವಯೋಗಾಶ್ರಮ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ವಿರಕ್ತಮಠ ಧರ್ಮದರ್ಶಿ ಸಮಿತಿಯ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, 1153 ಶ್ರಾವಣ ಪ್ರವಚನ ಸಮಿತಿಯ ಅಧ್ಯಕ್ಷ ಹಾಸಭಾವಿ ಕರಿಬಸಪ್ಪ, ಚಿಗಟೇರಿ ಜಯದೇವ, ವೀರಯ್ಯ ಎಂ. ಕಾಡದೇವರಮಠ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿರಕ್ತ ಮಠದ ಬಸವ ಕಲಾಲೋಕದಿಂದ ವಚನಗಾಯನ ನಡೆಯಲಿದೆ” ಎಂದು ತಿಳಿಸಿದರು.
ಕಾರ್ಯದರ್ಶಿ ಬಾಳೆಕಾಯಿ ಮುರುಗೇಶ್ ಮಾತನಾಡಿ, “ಡಾ.ಬಸವ ಪ್ರಭು ಶ್ರೀಗಳ ನೇತೃತ್ವದಲ್ಲಿ ಜುಲೈ 28ರ ಸೋಮವಾರ ಬೆಳಿಗ್ಗೆ 10ಕ್ಕೆ ವಿರಕ್ತ ಮಠದಲ್ಲಿ ಮಹಿಳಾ ಬಸವ ಕೇಂದ್ರದಲ್ಲಿ ಬಸವ ಪಂಚಮಿ ಪ್ರಯುಕ್ತ ಹಾಲು ಕುಡಿಸುವ ಹಬ್ಬ, “ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲಾಗಲಿ” ಸಮಾರಂಭ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ ?ದಾವಣಗೆರೆ | ಯೂರಿಯಾ ರಸಗೊಬ್ಬರ ಅಭಾವ; ರೈತರ ಬೆಳೆಗಳಿಗೆ ಅಗತ್ಯ ಗೊಬ್ಬರ ಒದಗಿಸಲು ರೈತ ಸಂಘ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಕಣಕುಪ್ಪಿ ಮುರುಗೇಶ್, ಕುಂಟೋಜಿ ಚನ್ನಪ್ಪ, ಕುಮಾರ ಶಾಸ್ತಿ, ದಾನಯ್ಯ ಶಾಸ್ತ್ರೀ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.