ದೇಶದ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ, ಮೇ20, 2025ರಂದು ಎಐಯುಟಿಯುಸಿ ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ದಾವಣಗೆರೆ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಕ್ಕೋತ್ತಾಯ, ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು,”ದೇಶದಲ್ಲಿ ಕಾರ್ಮಿಕರು, ಅಸಂಘಟಿತ, ದುಡಿಯುವ ವರ್ಗದ ಜನರ ವಿರೋಧಿ ನೀತಿಗಳನ್ನು ಸರ್ಕಾರಗಳು ರೂಪಿಸುತ್ತಿವೆ. ಇದರಿಂದ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದು, ವಿರೋಧಿ ನೀತಿಗಳನ್ನು ಕೈಬಿಡಬೇಕು ಮತ್ತು ಅವರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದೇಶದ್ಯಂತ ಎಐಯುಟಿಯುಸಿ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಮತ್ತು ಮುಷ್ಕರದಲ್ಲಿ ಭಾಗವಹಿಸುತ್ತದೆ.
“ರಾಜ್ಯದಲ್ಲಿ ಕಳೆದ ಜನವರಿಯಲ್ಲಿ ಅನಿರ್ದಿಷ್ಟ ಆಶಾ ಕಾರ್ಯಕರ್ತೆಯರ ಹೋರಾಟದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ ಮಾಸಿಕ 10000 ರೂ. ಗೌರವ ಧನ ಘೋಷಿಸಬೇಕು. ಕೇಂದ್ರದಲ್ಲಿ ಇತ್ತೀಚಿನ ಪಾರ್ಲಿಮೆಂಟ್ ಅಧಿವೇಶನದ ಸಮಯದಲ್ಲಿ ಮಾನ್ಯ ಕೇಂದ್ರ ಆರೋಗ್ಯ ಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಹೇಳಿದ ಪ್ರೋತ್ಸಾಹಧನ ಹೆಚ್ಚಳ ಕೂಡಲೇ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಿ ವಿದ್ಯುತ್ ಕಾಯ್ದೆ ತಿದ್ದುಪಡೆ ಮಸೂದೆ 2023 ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
“ಕೆಲಸದ ಅವಧಿಯನ್ನು ಪ್ರಸ್ತುತ ಇರುವ ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 48 ಗಂಟೆ ಮಿತಿಯನ್ನು ಖಾತ್ರಿಗೊಳಿಸಿ, ಮಹಿಳೆಯರಿಗೆ ರಾತ್ರಿ ಪಾಳಿ ಅವಕಾಶ ನೀಡುವ ಆದೇಶವನ್ನು ಪಡೆಯಿರಿ. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಖಾತ್ರಿಪಡಿಸಿ. ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಉದ್ಯೋಗದ ಹಕ್ಕನ್ನು ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಘೋಷಿಸಬೇಕು ಎಂದು ಸಂಘಟನೆಯು ಒತ್ತಾಯಿಸುತ್ತದೆ” ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ತಿಪ್ಪೇಸ್ವಾಮಿ, ಮಂಜುನಾಥ್ ಕುಕ್ಕವಾಡ, ಜಿಲ್ಲಾ ಅಧ್ಯಕ್ಷೆ ಲಲಿತಮ್ಮ, ಇಂದ್ರಮ್ಮ, ನೇತ್ರಾವತಿ, ಶಿಲ್ಪಾ, ತಿಪ್ಪಮ್ಮ, ಹಾಲಮ್ಮ ಸೇರಿದಂತೆ ಇತರ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.