“ದಾವಣಗೆರೆ ರಂಗಾಯಣದ ವತಿಯಿಂದ ಮಾರ್ಚ್ 27 ರಂದು ಸಂಜೆ ದಾವಣಗೆರೆ ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಆಯೋಜಿಸಲಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಎಂಬತ್ತರ ಅಂಚಿನ ಏರುಪ್ರಾಯದ ವಿದ್ವಾನ್ ಪುಟ್ಟಣ್ಣಯ್ಯನವರ ಕನ್ನಡ ರಂಗಸಂಗೀತದ ಸವ್ಯಸಾಚಿ ಸ್ವರ ಸಾರಥ್ಯದ ‘ರಂಗ ಗೀತಾಂಜಲಿ’ ತಂಡದಿಂದ ದಾವಣಗೆರೆ ಸಹೃದಯರಿಗೆ ರಂಗಸಂಗೀತದ ರಸದೌತಣ ಏರ್ಪಡಿಸಲಾಗಿದೆ” ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.

ಮೈಸೂರು ನಿವಾಸಿ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯನವರ (ವಿದ್ವಾನ್ ಪುಟ್ಟಣ್ಣಯ್ಯ ) ಹುಟ್ಟೂರು ಹಾಸನ ಜಿಲ್ಲೆ ಅರಸೀಕೆರೆ ಬಳಿಯ ಯರಿಗೇನಹಳ್ಳಿ. ತಂದೆ ಮುದ್ದಪ್ಪ ಮತ್ತು ತಾಯಿ ಲಕ್ಷ್ಮಮ್ಮ. ಇವರ ತಾತ ಸಿದ್ದಪ್ಪ, ಮೂಡಲಪಾಯ ಯಕ್ಷಗಾನದ ಭಾಗವತರು. ಬಾಲ್ಯದಿಂದಲ್ಲೇ ರಂಗಸಂಸ್ಕೃತಿಯ ಒಡನಾಟದಲ್ಲಿ ಬೆಳೆದವರು.
ಪುಟ್ಟಣ್ಣಯ್ಯ ದಕ್ಷಿಣಾದಿ ಸಂಗೀತದ ಪ್ರೌಢಿಮೆ. ಲೀಲಾಜಾಲ ಮಾತ್ರವಲ್ಲ , ಲಾಲಿತ್ಯಮಯವಾಗಿ ಹಾರ್ಮೋನಿಯಂ ನುಡಿಸುವ ನೈಪುಣ್ಯ ಗಳಿಸಿದವರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಂತೂ ಪುಟ್ಟಣ್ಣಯ್ಯ ಅವರ ಮಧುರ ಕಂಠ ಮತ್ತು ಹಾರ್ಮೋನಿಯಂ ನುಡಿಸುವ ಸಲೀಲತೆಗೆ ಉತ್ಕೃಷ್ಟತೆಯ ಮೆರುಗು ನೀಡಿತು.
ಮೈಸೂರು ರಂಗಾಯಣಕ್ಕೆ ಸದಾರಮೆ, ಮಂಡ್ಯ ರಮೇಶ ‘ನಟನ’ ತಂಡಕ್ಕೆ ಸುಭದ್ರಾ ಕಲ್ಯಾಣ ಸೇರಿದಂತೆ ಸುರುಚಿ ರಂಗಮನೆ, ಕದಂಬ ರಂಗವೇದಿಕೆಗಳಿಗೆ ಮನ್ಮಥ ವಿಜಯ, ಕುರುಕ್ಷೇತ್ರ ಮುಂತಾದ ನಾಟಕಗಳ ರಂಗಸಂಗೀತ, ವಿನ್ಯಾಸ, ನಿರ್ದೇಶನದ ಮಹಾಮಣಿಹ ಪ್ರಾಪ್ತಿ. ವಾಲ್ಮೀಕಿ ವಿರಚಿತ “ಶ್ರೀಮದ್ ರಾಮಾಯಣ” ಎಂಬ ಸಂಗೀತ ಸಾದೃಶ್ಯ ಮಹಾಕಾವ್ಯವನ್ನು ಇತ್ತೀಚೆಗೆ ರಂಗಪ್ರಯೋಗಕ್ಕಿಳಿಸಿ ಯಶಸ್ಸು ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.
ಪುಟ್ಟಣ್ಣಯ್ಯನವರ ಸಿರಿಕಂಠದ ಸುಮಧುರ ಸರೋವರದಲ್ಲಿ 2783 ರಂಗಗೀತೆಗಳು ಮಾಧುರ್ಯಗೊಂಡಿವೆ. ಹೀಗೆ ಚೈತನ್ಯಶೀಲ ವೃತ್ತಿ ರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಇಷ್ಟೆಲ್ಲಾ ಪಾಂಡಿತ್ಯದ ಹಿರಿಮೆಯಾದ ಪುಟ್ಟಣ್ಣಯ್ಯ ಅವರು ವಿಧೇಯಭಾವದ ಸಜ್ಜನಿಕೆಯ ವ್ಯಕ್ತಿತ್ವವುಳ್ಳಂತಹ ಪುಟ್ಟಣ್ಣಯ್ಯ ದಾವಣಗೆರೆಯ ಜನತೆಗೆ ರಂಗಸಂಗೀತದ ರಸದೌತಣ ನೀಡಲಿದ್ದಾರೆ ಎಂದು ದಾವಣಗೆರೆ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.