“ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಚಿಂತನೆ ಇರಬೇಕು. ಹೆಚ್ಚು ಪುಸ್ತಕಗಳನ್ನು ಓದುವ ಜೊತೆಗೆ ಅದರಲ್ಲಿರುವ ವಿಚಾರಗಳನ್ನು ಅರ್ಥಮಾಡಿಕೊಂಡು ಓದುವ ಅವಶ್ಯಕತೆ ಇದೆ. ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಉತ್ತಮ ಕೆಲಸಕ್ಕೆ ಬಳಕೆ ಮಾಡಿಕೊಳ್ಳಿ. ಓದಿನ ಕಡೆಗೆ ನಿಮ್ಮ ಗಮನ ಹೆಚ್ಚು ಇರಲಿ. ನಿಮ್ಮ ತಂದೆ ತಾಯಿಗಳಿಗೆ ಸಿಗುವ ಗೌರವಗಳೇ ನಿಮ್ಮ ಸಾಧನೆಗಳಾಗಲಿ” ಎಂದು ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾದ ನ್ಯಾ. ಮಹಾವೀರ ಮ ಕರೆಣ್ಣವರ ಕಿವಿಮಾತು ಹೇಳಿದರು. .
ದಾವಣಗೆರೆ ನಗರದ ವನಿತಾ ಸಮಾಜದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಜಿಲ್ಲಾ ಸಮಿತಿ ದಾವಣಗೆರೆ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ & ಪಿಯುಸಿಯಲ್ಲಿ ಪಾಸಾದ ಕಾರ್ಮಿಕರ ಮಕ್ಕಳಿಗೆ 7 ನೇ ವರ್ಷದ ಮಾರ್ಗದರ್ಶನ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ ಕರೆಣ್ಣವರ ಮಾತನಾಡಿದರು.
“ಸರ್ಕಾರದ ಹಲವಾರು ಇಲಾಖೆಗಳ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿದುಕೊಳ್ಳುವುದು ಜವಾಬ್ದಾರಿಯುತ ಕೆಲಸ. ಕೇವಲ ಸರ್ಕಾರದ ಕೆಲಸವೆಂದು ಕೈಕಟ್ಟಿ ಕೂರದೆ ಸರ್ಕಾರಿ ಸೌಲಭ್ಯಗಳ ಮಾಹಿತಿ ಪಡೆದು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಮಕ್ಕಳಿಗೆ ಮಾರ್ಗದರ್ಶನ ಮತ್ತು ಅಭಿನಂದಿಸುತ್ತಿರುವ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಕಾರ್ಯ ನಿಜವಾಗಲು ಮೆಚ್ಚುವಂತದ್ದು” ಎಂದು ಶ್ಲಾಘಿಸಿದರು.

ದಾವಣಗೆರೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ “ಸಮಾಜದಲ್ಲಿ ಶಿಕ್ಷಣ ಅತ್ಯಗತ್ಯ, ಶಿಕ್ಷಣದಿಂದಲೇ ಸಮಾಜ ಬದಲಾವಣೆ ಮಾಡಲು ಸಾಧ್ಯ ಎಂಬ ಮಾತನ್ನು ಅಂಬೇಡ್ಕರ್ ಅವರು ಹೇಳಿದ್ದಾರೆ. ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ನಿಮ್ಮ ತಂದೆ ತಾಯಿಗಳಿಗೂ ಗೌರವ ಹೆಚ್ಚುತ್ತದೆ” ಎಂದು ತಿಳಿಸಿದರು.
“ಶಿಕ್ಷಣ ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವಂತೆ ಮಾಡುತ್ತದೆ. ಸಿನಿಮಾ ಹೀರೋಗಳು ಕ್ರಿಕೆಟ್ ಆಟಗಾರರು ನಮಗೆ ಆದರ್ಶವಲ್ಲ. ಬುದ್ದ, ಬಸವಣ್ಣ. ಅಂಬೇಡ್ಕರ್, ಪೆರಿಯಾರ್, ಭಗತ್ ಸಿಂಗ್ ಅಂತವರು ನಮಗೆ ಆದರ್ಶ, ನಮಗೇ ನಾವೇ ದಾರಿದೀಪವಾಗೋಣ. ಎಲ್ಲಾ ಇಲಾಖೆಗಳ ಮಾಹಿತಿಯನ್ನು ಪಡೆದುಕೊಂಡು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ” ಎಂದು ಮಾರ್ಗದರ್ಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಡು, ಭೂಮಿ ಸಂರಕ್ಷಿಸಲು ಕರೆ, ವಿಮುಕ್ತಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಸರೋವರ್ ಬೆಂಕಿಕೆರೆಯವರು ಮಾತನಾಡಿ “ಇವತ್ತಿನ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ನಾವು ಟ್ಯಾಲೆಂಟ್ ಅನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹುಟ್ಟಿನಿಂದಲ್ಲೇ ಇಂಗ್ಲೀಷ್ ಬಗ್ಗೆ, ತಂತ್ರಜ್ಞಾನದ ಬಗ್ಗೆ ಮಾಹಿತಿ ಇರುವ ಮಕ್ಕಳು ಮತ್ತು ಮೊದಲನೇ ಪೀಳಿಗೆಯಾಗಿ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿರುವ ಮಕ್ಕಳು ಇಬ್ಬರಿಗೂ ಒಂದೇ ಅಳತೆಗೋಲು ಇಡಬಾರದು. ತಂದೆ ತಾಯಿ ಶಿಕ್ಷಿತರಾಗಿರುವ ಮಕ್ಕಳು 95% ತೆಗೆಯುಅಂಕ ಗಳಿಸುವುದು ಮತ್ತು ಮೊದಲನೇ ಪೀಳಿಗೆಯಾಗಿ ಶಿಕ್ಷಿತರಾಗುತ್ತಿರುವ ಮಕ್ಕಳು 35% ಗಳಿಸುವುದು ಒಂದೇ” ಎಂದು ಅಭಿಪ್ರಾಯಪಟ್ಟರು..
ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಬಿ ಖಲೀಲ್, ಪವಿತ್ರ, ಕರ್ನಾಟಕ ಶ್ರಮಿಕ ಶಕ್ತಿ ಸತೀಶ್ ಅರವಿಂದ್, ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗಳು, ಕಾರ್ಮಿಕರು ಭಾಗವಹಿಸಿದ್ದರು.