ಶಿಕ್ಷಣ ಮೂಲಭೂತ ಹಕ್ಕು ಎಂಬ ಸಾಂವಿಧಾನಿಕ ಆಶಯವನ್ನು ರಾಜ್ಯ ಸರ್ಕಾರ ಎತ್ತಿ ಹಿಡಿಯಬೇಕು. ಕರ್ನಾಟಕ ರಾಜ್ಯದಲ್ಲಿ ಇರುವ ಸರಕಾರಿ ಶಾಲೆಗಳನ್ನು ಸದೃಢಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿದ 21 ಅಂಶಗಳ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆಯ ಕರ್ನಾಟಕ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧಿಕಾರಿಗಳಾದ ಗಂಗಾಧರ ಸ್ವಾಮಿಯವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮನವಿಯನ್ನು ಸಲ್ಲಿಸಿದರು.
“ಕನ್ನಡ ಶಾಲೆಗಳನ್ನು ಸದೃಢಗೊಳಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಅಂದಿನ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್ ಜಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯನ್ನು ಜೂನ್ 23, 2016 ರಲ್ಲಿ ರಚಿಸಿದ್ದು, ಈ ಸಮಿತಿಯಲ್ಲಿ ವಿಶೇಷ ಶಿಕ್ಷಣ ತಜ್ಞರಾದ ವಿ ಪಿ ನಿರಂಜನರಾಧ್ಯ ಹಾಗೂ ಕನ್ನಡ ಪರ ಚಿಂತಕರು ಬೇರು ಮಟ್ಟದ ಶಿಕ್ಷಣ ವ್ಯವಸ್ಥೆಯಿಂದ ಆಡಳಿತದ ಎಲ್ಲಾ ಹಂತಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಮಗ್ರವಾಗಿ ಪರಿಶೀಲಿಸಿ ಅಂತಿಮ ವರದಿಯಲ್ಲಿ 21 ಶಿಫಾರಸುಗಳನ್ನು ಮಾಡಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಶಾಸಕರು ಮತ್ತು ಸಚಿವರು ಚರ್ಚೆ ಮಾಡಬೇಕು ಹಾಗೂ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವರದಿಯಅಂಶಗಳು-
ಮಕ್ಕಳ ಜೀವ ರಕ್ಷಣೆ ಹಿತದೃಷ್ಟಿ ಹಾಗೂ ಪೋಷಕರು ನಿರಳವಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ದುಃಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು. ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತುರ್ತು ಕ್ರಮವಹಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ ವಿಲೀನ ಮಾಡುವ ಪ್ರತಿಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಸರ್ಕಾರಿ ಶಾಲೆಗಳನ್ನು ತೆರೆಯಲು ಪುನಃ ಕ್ರಮ ಕೈಗೊಳ್ಳಬೇಕು. ಒಂದನೇ ತರಗತಿಯಿಂದಲೇ ಇಂಗ್ಲೀಷನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬೇಕು. ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಇ – ಲೈಬ್ರರಿ, ಇ – ಬುಕ್ ಇತ್ಯಾದಿ ತಂತ್ರಜ್ಞಾನ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಬೇಕು. ಕೇಂದ್ರ ಸರ್ಕಾರದ ಒಟ್ಟು ನಿವ್ವಳ ಉತ್ಪನ್ನದಲ್ಲಿ ಕನಿಷ್ಠ ಶೇಕಡ 10ರಷ್ಟು ಮತ್ತು ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಕನಿಷ್ಠ ಶೇಕಡ 25 ರಷ್ಟರನ್ನು ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಯ ತತ್ವದ ಮೇಲೆ ಬಲವರ್ಧನೆಗೊಳಿಸಲು ಮೀಸಲಿರಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಪುನಶ್ಚೇತನಗೊಳಿಸಬೇಕು. ಪ್ರಾಥಮಿಕ ಹಿರಿಯ, ಕಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಪಠ್ಯೇತರ ಮತ್ತು ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು. ಸಂಗೀತ ಚಿತ್ರಕಲೆ ದೈಹಿಕ ಶಿಕ್ಷಣ ತೋಟಗಾರಿಕೆ ಕರಕುಶಲ ಕಲೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ಕಲಿಕೆ ನೀಡಬೇಕು.
ಈ ಎಲ್ಲಾ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಕಾಯಿದೆಯ ರೂಪದಲ್ಲಿ ಹೊರ ತರುವ ಮೂಲಕ ಶಿಕ್ಷಣ ಮೂಲಭೂತ ಹಕ್ಕು ಎಂಬ ಸಾಂವಿಧಾನಿಕ ಆಶಯವನ್ನು ಎತ್ತಿ ಇಡುವ ಬದ್ಧತೆಯನ್ನು ರಾಜ್ಯ ಸರ್ಕಾರ ಮತ್ತು ಚುನಾಯಿತಗೊಂಡಿರುವ ಜನಪ್ರತಿನಿಧಿಗಳು ಖಚಿತ ಪಡಿಸಬೇಕಿದೆ. ಸರಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಗೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸ್ಮಶಾನ ಒತ್ತುವರಿ | ಹಲವು ವರ್ಷಗಳಾದರೂ ತೆರವುಗೊಳಿಸದೆ ಅಧಿಕಾರಿಗಳ ನಿರ್ಲಕ್ಷ್ಯ
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯು ಹೋರಾಟ ಸಮಿತಿಯ ಲಿಂಗರಾಜು ಎಂ ಗಾಂಧಿನಗರ, ಬೆನಕನಹಳ್ಳಿ ಪರಮೇಶ್ವರಪ್ಪ, ಭರತ್ ಕುಮಾರ್, ಆದಿಲ್ ಖಾನ್.ಎಸ್ ಕೆ. ರವೀಂದ್ರ. ಕೆ ಹಾಗೂ ಇತರರು ಹಾಜರಿದ್ದರು.