“ದೇಶದಲ್ಲಿ ಮೂರು ಮುಖ್ಯ ಪಿಡುಗುಗಳಿದ್ದು, ಮೂಢನಂಬಿಕೆ, ಭ್ರಷ್ಟಾಚಾರ, ಮತ್ತು ಜಾತಿವ್ಯವಸ್ಥೆಯ ಮೂರು ಪಿಡುಗುಗಳಿಂದಾಗಿ ಸಮಸ್ಯೆಗಳುಂಟಾಗಿ ದೇಶದ ಅಭಿವೃದ್ಧಿ ಕುಂಠಿತ ಆಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯವೇ ಪರಿಹಾರ” ಎಂದು ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಬಿ. ರುದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಆವರಗೆರೆ ಗ್ರಾಮದ ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ವಚನ ಸಂರಕ್ಷಣೆ ದಿನ ಹಾಗೂ ಫ.ಗು. ಹಳಕಟ್ಟಿ ಅವರ ಜನ್ಮದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದತ್ತಿ ದಾನಿಗಳಾದ ವಿಭೂತಿ ಬಸವಾನಂದ ಶರಣರು ಮಾತನಾಡಿ, “ಭಾರತ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಇಂದು ಬಹುತ್ವದ ಭಾರತವಾಗಿ ಉಳಿಯಬೇಕಾದರೆ ವಚನ ಸಾಹಿತ್ಯ ಪ್ರಚಾರ ಆಗಬೇಕು. ಬಹುತ್ವದ ಭಾರತವನ್ನು ಉಳಿಸಲು ವಚನ ಸಾಹಿತ್ಯ ಮುಖ್ಯ” ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಆವರಗೆರೆ ರುದ್ರಮುನಿ ಮಾತನಾಡಿ, “ಸುಸಂಸ್ಕೃತ ಸಮಾಜ ನಿರ್ಮಾಣ ಮಕ್ಕಳಿಂದಲೇ ಸಾಧ್ಯ. ಹಾಗಾಗಿ ಮಕ್ಕಳಿಗೆ ವಚನ ಸಾಹಿತ್ಯ ಉಣಬಡಿಸುವ ಕಾರ್ಯ ಮಹತ್ವದ್ದು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪರಿಷತ್ತಿನ ಕಾರ್ಯದರ್ಶಿ ಕರೂರು ಹನುಮಂತಪ್ಪ ವಚನ ಸಾಹಿತ್ಯದ ಕುರಿತು ಹಾಗೂ ಮಾನವ ಬಂಧುತ್ವ ವೇದಿಕೆಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು. ಅನುಭಾವ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಇವರು ವಚನ ಸಾಹಿತ್ಯದ ನಾಶ ಮಾಡುವ ಕೆಲಸ ಹೇಗಾಯಿತು, ಅದರ ಸಂರಕ್ಷಣೆಗಾಗಿ ಶರಣರು ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಬಗೆ ಹಾಗೂ ಫ. ಗು. ಹಳಕಟ್ಟಿ ಅವರ ಕುರಿತು ಅನುಭಾವವನ್ನು ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾ ಜಲಾಶಯ ಸಮೀಪ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಬಂದ್
ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಮುದೇಗೌಡ್ರ ನಾಗರಾಜ ಕಕ್ಕರಗೊಳ್ಳ, ಶಾಲಾ ಮುಖ್ಯೋಪಾಧ್ಯಾಯರಾದ ಎಂ.ಬಿ. ಪ್ರಕಾಶ, ಶಿಕ್ಷಕ ಲೋಕೇಶ, ವಿರೂಪಾಕ್ಷಪ್ಪ, ಜಗದೀಶ, ದಾವಣಗೆರೆ ತಾಲೂಕು ಮಹಿಳಾ ಬಂಧುತ್ವ ವೇದಿಕೆಯ ಸುಮಲತಾ ಸೇರಿದಂತೆ ಶಾಲಾ ಸಿಬ್ಬಂದಿವರ್ಗ, ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.