ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಕೆಲ ಕ್ಷಣದಲ್ಲಿಯೇ ಮೃತಪಟ್ಟ ಘಟನೆ ದಾವಣಗೆರೆ ನಗರದ ಜಯನಗರದಲ್ಲಿ ನಡೆದಿದೆ.
ವ್ಯಾಪಾರೋದ್ಯಮಿಯೊಬ್ಬರ ಪುತ್ರ ಅಕ್ಷಯ್ ಎನ್ನುವ 22 ವರ್ಷ ವಯಸ್ಸಿನ ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದ್ದು, ಮನೆಯಲ್ಲಿದ್ದ ವೇಳೆ ಅಕ್ಷಯ್ ಇದ್ದಕ್ಕಿದ್ದಂತೆ ಎದೆ ನೋವಿನಿಂದ ಕುಸಿದು ಬಿದ್ದಿದ್ದರು ಎಂದು ತಿಳಿದು ಬಂದಿದೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಅಕ್ಷಯ್ ಮೃತಪಟ್ಟಿದ್ದಾನೆ.
ಸೋಮವಾರವಷ್ಟೇ ಆಟೋದಲ್ಲಿ ಕುಳಿತಿದ್ದ ಆಟೋ ಚಾಲಕ ನಗರದ ಎಸ್‌ಒಜಿ ಕಾಲೋನಿಯ ಎ ಬ್ಲಾಕ್‌ನ ಸಂಗಪ್ಪ ಹೃದಯಾಘಾತದಿಂದ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿದ್ದರು. ಎಂದಿನಂತೆ ಆಟೋ ಓಡಿಸಲು ಬಂದಿದ್ದ ಅವರು ಬೆಳಗ್ಗೆ ರೈಲ್ವೆ ನಿಲ್ದಾಣದಲ್ಲಿ ಆಟೋ ನಿಲುಗಡೆ ಮಾಡಿದ್ದರು. ಈ ವೇಳೆ ಆಟೋದಲ್ಲಿ ಕುಳಿತಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾವಣಗೆರೆಯಲ್ಲಿ ಒಂದೇ ದಿನದ ಅಂತರದಲ್ಲಿ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಜಯದೇವ ವೈದ್ಯರ ನೇತೃತ್ವದ ತಜ್ಞರ ಸಮಿತಿ ಹೃದಯಘಾತಗಳಿಗೆ ಲಸಿಕೆ ಕಾರಣವಲ್ಲ. ಕೋವಿಡ್ ನಂತರ ಹೆಚ್ಚುತ್ತಿರುವ ಮಧು ಮೇಹ ಹೃದಯಾಘಾತಕ್ಕೆ ಕಾರಣವಾಗಿದೆ. ಅಲ್ಲದೆ ರಕ್ತದೊತ್ತಡ ಹೆಚ್ಚಿನ ಮಟ್ಟದಲ್ಲಿದ್ದರೆ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆಧುನಿಕ ಆಹಾರ ಪದ್ಧತಿ ಮತ್ತು ಜೀವನಶೈಲಿ, ಕಡಿಮೆ ಶ್ರಮದಾನ, ದೇಹದ ಚಟುವಟಿಕೆ ಕಡಿಮೆಯಿರುವುದು, ವ್ಯಾಯಾಮ ಮಾಡದಿರುವುದು, ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆಯುವುದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಚಾರ ಸುರಕ್ಷತೆಗೆ ರಸ್ತೆಗಿಳಿದ ಜಿಲ್ಲಾಧಿಕಾರಿ; ಸಂಚಾರ ನಿಯಮ ಪಾಲಿಸದ ವಾಹನಗಳ ವಶ, ನೋಟೀಸ್ ಜಾರಿ
ಆದರೆ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತಜ್ಞರ ವರದಿ ಮತ್ತು ಶಿಫಾರಸುಗಳ ಮೇಲೆ ಹಲವು ಕ್ರಮಗಳನ್ನು , ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಆಸ್ಪತ್ರೆಯ ಹೊರಗೆ ಸಂಭವಿಸುವ ಹಠಾತ್ ಮರಣಗಳು ಮತ್ತು ಹೃದಯಾಘಾತ ಪ್ರಕರಣಗಳಲ್ಲಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದೆ.