ಒಳಪಂಗಡಗಳು ಒಂದಾಗ ಬೇಕು. ಎಲ್ಲಿಯವರೆಗೆ ಒಳಪಂಡಗದಲ್ಲಿ ರಕ್ತ ಸಂಬಂಧ ಬೆಳೆಸುವುದಿಲ್ಲವೋ, ಅಲ್ಲಿಯವರೆಗೆ ಒಂದಾಗಲು ಸಾಧ್ಯವಿಲ್ಲ. ಒಳಪಂಗಡಗಳಲ್ಲಿ ಸಂಬಂಧ ಬೆಳೆಸಿದಾಗ ಸಮಾಜ ಬಲಿಷ್ಠವಾಗಲು ಸಾಧ್ಯ. ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವುದು ನಮ್ಮ ಗುರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಅವರು ಮಾತನಾಡಿದರು. “ವೀರಶೈವ ಲಿಂಗಾಯತ ಸಮಾಜ ಕರ್ನಾಟಕದಲ್ಲಿ ಬಲಿಷ್ಟವಾಗಿದೆ. ಮಾತ್ರವಲ್ಲ ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಲಿಂಗಾಯತರಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಜನ ಒಳ ಪಂಗಡಗಳಲ್ಲಿ ವಿವಾಹ ಸಂಬಂಧ ಬೆಸೆಯಬೇಕು. ಆಗ ಮಾತ್ರ ಸಮುದಾಯ ಸಂಘಟನೆ ಸಾಧ್ಯ” ಎಂದರು.
“ವೀರಶೈವ ಲಿಂಗಾಯಿತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಈ ಬಗ್ಗೆ ಒಂದು ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕು. ಎಲ್ಲ ಪಂಗಡಗಳು ಸೇರಬೇಕು” ಎಂದರು.
“ದೇಶದಲ್ಲಿ ಜಾತಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಯುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಜನ ಸಂಖ್ಯೆ ಎಷ್ಟು ಇದೆ. ಶೈಕ್ಷಣಿಕ ಪ್ರಗತಿ ಎಷ್ಟಿದೆ ಸಾಮಾಜಿಕ ಸ್ಥಿತಿ ಹೇಗಿದೆ. ಇದರ ಬಗ್ಗೆ ಅಧ್ಯಯನ ಬೇಕಿದೆ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಬೇಕಿದೆ. ಬಸವಣ್ಣನವರು ನೀಡಿದ ಸಂದೇಶವನ್ನು ನಾವೆಲ್ಲರೂ ಪಾಲನೆ ಮಾಡೋಣ” ಎಂದು ಕರೆ ಕೊಟ್ಟರು.
ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, “ಅಖಿಲ ಭಾರತ ವೀರಶೈವ ಮಹಾಸಭಾ ರಚಿಸಿ, ಎಲ್ಲ ವೀರಶೈವರನ್ನು ಒಂದೆಡೆ ಮಾಡಿದ ಮಹಾನ್ ವ್ಯಕ್ತಿ ಹಾನಗಲ್ ಕುಮಾರಸ್ವಾಮಿಗಳು. ಈ ಸಮಾಜಕ್ಕೆ ದಿಕ್ಕೂಚಿ ಕೊಡಬೇಕಾಗಿಲ್ಲ. ಎಲ್ಲರಿಗೂ ಕೂಡ ಅದರ ಅರಿವಿದೆ. ಆದರೆ, ಆಚರಣೆ ಇಲ್ಲ. ಆಚರಣೆಗೆ ಬಾರದ ಕಾರಣ ಸಮಾಜ ದುರ್ಬಲವಾಗಿದೆ” ಎಂದು ತಿಳಿಸಿದರು.
“ಸರ್ವಜ್ಞನ ಪ್ರಕಾರ ಸಮಾಜದಲ್ಲಿ 3 ಜನ ಶತ್ರುಗಳಿದ್ದಾರೆ – ಬುದ್ದಿ ಕಲಿಸದ ತಂದೆ, ತಿದ್ದಿ ಕಲಿಸದ ಗುರು, ಬಿದ್ದರೂ ಎತ್ತದ ತಾಯಿ – ಈ ಮೂವರು ಸಮಾಜದ ಪಾಲಿಗೆ ಶತ್ರುಗಳು. ಸಮಾಜ ದಿಕ್ಕುತಪ್ಪಿ ಹೋಗುವಾಗ ಸಮಾಜಕ್ಕೆ ಬುದ್ದಿ ಹೇಳದ ಮಠಾಧಿಪತಿಗಳು ಸಹ ಶತ್ರುಗಳೇ, ಸಮಾಜದಲ್ಲಿ ಏನಾದರೂ ನೇರವಾಗಿ ಹೇಳಿದರೆ ತಿಳಿದುಕೊಳ್ಳುವುದಿಲ್ಲ. ಮುಚ್ಚಿ ಹೇಳಿದರೆ ಅರ್ಥ ಆಗುವುದಿಲ್ಲ. ನೇರವಾದ ಮಾತುಗಳನ್ನು ಮಠಾಧೀಪತಿಗಳೇ ಹೇಳ ಬೇಕು. ಇಲ್ಲವಾದಲ್ಲಿ ಸಮಾಜ ದಾರಿ ತಪ್ಪಿ ಹೋಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಮೋದಿ- ಅಮಿತ್ ಶಾ ಲೂಟಿ ಮಾಡುವ ಜೋಡೆತ್ತುಗಳು: ಮುಖ್ಯಮಂತ್ರಿ ಚಂದ್ರು
“ಹಾನಗಲ್ಲ ಕುಮಾರಸ್ವಾಮಿಗಳನ್ನು ನಾವು ಮಾದರಿಯನ್ನಾಗಿ ಇಟ್ಟುಕೊಂಡರೆ ನಾವು ಸಮಾಜ ಕಟ್ಟುವುದು ಹೇಗೆಂದು ತಿಳಿದುಕೊಳ್ಳಬಹುದು. ಅವರು ಮಠಮುಖಿ ಸ್ವಾಮಿಗಳಾಗಲಿಲ್ಲ. ಸಮಾಜಮುಖಿ ಸ್ವಾಮಿಗಳಾದರು. ಇನ್ನೂ ನಾವುಗಳು ಮಠಮುಖಿ ಸ್ವಾಮಿಗಳಾಗಿದ್ದು, ಸಮಾಜ ಮುಖಿ ಸ್ವಾಮಿಗಳಾಗಬೇಕು. ಸಮಾಜ ಬೆಳೆಸುವ ಉದ್ದೇಶದಿಂದ ನಾವು ಮುಂದೆ ಬರಬೇಕು. ಇನ್ನು ರಾಜಕೀಯ ನಾಯಕರು ಸಮಾಜಮುಖಿ ಆಗದೇ ಪಕ್ಷಮುಖಿ ಆಗಿದ್ದಾರೆ. ಅವರಿಗೆ ಸಮಾಜ ಬೇಕಾಗಿಲ್ಲ. ಪಕ್ಷ ಮುಖಿ ಆಗಿದ್ದಾರೆ. ಪಕ್ಷದ ಮೇಲೆ ಇರುವ ಅಭಿಮಾನ ಶೇ.50ರಷ್ಟು ಸಮಾಜದ ಮೇಲೆ ಇದ್ದಿದ್ದರೆ ಇಂದಿನ ಮೈದಾನ ತುಂಬಿ ತುಳುಕುತ್ತಿತ್ತು. 75 ಜನ ಲಿಂಗಾಯುತ ಶಾಸಕರಿದ್ದರೂ ಈ ಮೈದಾನ ತುಂಬಿಲ್ಲ ಇದು ನಮ್ಮ ಸಮಾಜಕ್ಕೆ ಆಗಬೇಕಾದ ಅವಮಾನ” ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಹಲವು ಶಾಸಕರು ಇದ್ದರು.