“ನಿಮಗೆ ರೈತಾಪಿ ವರ್ಗ ಮುಖ್ಯವೋ ಅಥವಾ ಕೆಐಎಡಿಬಿ ಅಧಿಕಾರಿಗಳು ಮುಖ್ಯವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸರ್ಕಾರ ಉಳಿಯಬೇಕಾದರೆ ರೈತಾಪಿ ವರ್ಗದ ಜನರ ಮಾತು ಕೇಳಿ. ಜನಪರ ನಿಂತರೆ ಮಾತ್ರ ನಿಮ್ಮ ಸರ್ಕಾರ. ಸರಕಾರ ಉಳಿಯಬೇಕಾದರೆ ಜನರ ಮಾತನ್ನು ಕೇಳಿ…”
ಹೀಗಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಗೋಪಾಲಗೌಡ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟವು 1000 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರಣಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಕೃಷಿ ಕೈಗಾರಿಕೆಯನ್ನು ಧ್ವಂಸ ಮಾಡಲು ವಿದೇಶಿಗರನ್ನು ಇಲ್ಲಿಗೆ ಕರೆತರುತ್ತಿದ್ದಾರೆ. ಹೀಗಾದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಹಳ್ಳಿಗಾಡಿನ ರೈತರ ಬದುಕು ಏನಾಗಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ನಮ್ಮ ಹೋರಾಟ. ಸಂವಿಧಾನದಲ್ಲಿ ಕೃಷಿ ರೈತನ ಹಕ್ಕು ಎಂದು 19(1)-ಜಿ ಅಡಿಯಲ್ಲಿ ಹೇಳಲಾಗಿದೆ. ರೈತ ಗಾಳಿ, ನೀರು ಕುಡಿದು ಬದುಕಬೇಕಾ. ನಮ್ಮ ಮಕ್ಕಳನ್ನು ಐಎಎಸ್ ಅಧಿಕಾರಿ ಮಾಡಿದ್ದೀರಾ? ಉದ್ಯಮಿಗಳನ್ನಾಗಿ ಮಾಡಿದ್ದೀರಾ? ರೈತರು ನಿಮ್ಮ ಸಹಾಯ ಬೇಡಿದ್ದಾರಾ?. ಎಲ್ಲವೂ ಇವತ್ತು ದುಬಾರಿ ಆಗಿದೆ. ಟೂತ್ ಪೇಸ್ಟ್ ಕೂಡ ಜಾಸ್ತಿ ಆಗಿದೆ. ರೋಗಿ ಚಿಕಿತ್ಸೆಯಿಂದ ಹಿಡಿದು, ಯೋಗ್ಯವಾದ ಕುಡಿಯಲು ನೀರು ಕೊಡಲು ಸಾಧ್ಯ ಆಗಿದೆಯಾ? ಚರಂಡಿ ವ್ಯವಸ್ಥೆ ಸರಿಯಾಗಿದೆಯೇ? ಇವರೆಲ್ಲ ಜನ ಅಲ್ಲವಾ. ಇವರು ಮತ ನೀಡುವುದಿಲ್ಲವೆ. ಸಾರ್ವಭೌಮ ನಿಮಗೆ ಕೊಡುವುದಿಲ್ಲವೆ” ಎಂದು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

“ನಿಮ್ಮ ಮಾತುಗಳನ್ನ ಒಪ್ಪುತ್ತೇವೆ ಎಂದುಕೊಂಡರೆ ಅದು ನಿಮ್ಮ ದಡ್ಡತನ. ಹೋರಾಟಗಳನ್ನು ದಮನ ಮಾಡುವ ಕೆಲಸ ಮಾಡಿದರೆ ಯಾವುದೇ ಸರ್ಕಾರ ನಡೆಸಲು ನಾವು ಬಿಡುವುದಿಲ್ಲ. ಗಾಂಧೀಜಿಯನ್ನು ಜೈಲಿಗೆ ಕಳಿಸಿದ್ದನ್ನೂ ನಾವು ಕಂಡಿದ್ದೇವೆ. ಸ್ವತಂತ್ರ ಬಂದಮೇಲೆ ಎಲ್ಲ ವ್ಯವಸ್ಥೆ ಬಂದಿದೆ. ಆದ್ದರಿಂದ ಸಂವಿಧಾನ ಪರವಾದ ಪ್ರಜಾ ಆಡಳಿತ ಸರ್ಕಾರದ ಜವಾಬ್ದಾರಿಯಾಗಬೇಕು. ಹೋರಾಟ ದಮನ ಮಾಡಿ, ಕಾಲ್ನಡಿಗೆಯನ್ನು ನಿಲ್ಲಿಸಿದರೆ ನಾವು ಜಗ್ಗುವುದಿಲ್ಲ. ನಮಗೆ ಪೊಲೀಸರ ರಕ್ಷಣೆ ಬೇಕಾಗಿಲ್ಲ. ರೈತರ ಮೇಲಿನ ದಬ್ಬಾಳಿಕೆ ಬಗ್ಗೆ ನಮಗೆ ಗೊತ್ತಿದೆ. ನಿಮ್ಮ ಮೇಲೆ ದಾಖಲೆ ಸಮೇತ ಕೇಸುಗಳನ್ನು ಮಾಡುತ್ತೇವೆ” ಎಂದು ಎಚ್ಚರಿಸಿದರು.
ಸಂಸತ್‌ನಲ್ಲಿ ಅರ್ಥವಿಲ್ಲದ ಭಾಷಣ ಮಾಡುತ್ತಿದ್ದೀರಾ? ಹೆಣ್ಣು ಮಕ್ಕಳ ಶುಶ್ರೂಷೆಗೆ ನಿಮ್ಮಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಇವೆಲ್ಲವನ್ನೂ ಪಾಲಿಸಿ ನಂತರ ಜಾಗ ಕೇಳಿ. ಕೃಷಿಯನ್ನು ನಾಶಪಡಿಸಿ ಕೈಗಾರಿಕೆ ಮಾಡಿದರೆ ಏನು ಅನುಕೂಲ. ಬಂಡವಾಳಶಾಹಿಗಳಿಗೆ ಅಧಿಕಾರ. ಯಾರಿಗೆ ಬೇಕು ನಿಮ್ಮ ಅಧಿಕಾರ ಎಂದು ಗುಡುಗಿದರು.
ಕೈಗಾರಿಕಾ ನೀತಿ ಏನು ಎಂಬುದನ್ನು ಈವರೆಗೆ ತೋರಿಸಿಲ್ಲ. ಕೈಗಾರಿಕೆಗಳಿಗೆ ಎಲ್ಲೆಲ್ಲಿ ಎಷ್ಟು ಜಾಗ ಕೊಟ್ಟಿದ್ದೀರಿ? ಮಂತ್ರಿಗಳೇ ಜಾಗ ಕೊಟ್ಟು ಬಿಡುವುದಾ? ಕೆಐಎಡಿಬಿ ಸ್ವಾಧೀನ ಕುರಿತು ಪಾರದರ್ಶಕ ಮಾಹಿತಿ ಯಾಕೆ ಕೊಡುತ್ತಿಲ್ಲ. ನಮಗೆ ಅದರ ಮಾಹಿತಿ ಕೊಡಿ. ನಮಗೆ ಕೇಳುವ ಹಕ್ಕಿದೆ. ಅದಕ್ಕೆಲ್ಲ ಉತ್ತರ ಇಲ್ಲದೇ ನೋಟಿಫಿಕೇಶನ್ ಮಾಡಿದರೆ ನಮ್ಮನ್ನ ಕೇಳಿ ಮಾಡಿದ್ದೀರಾ ನೀವು?. 2019ರಲ್ಲಿ ಕಾಯಿದೆಗೆ ತಿದ್ದುಪಡಿ ತಂದ ಸರಕಾರವನ್ನು ಧೂಳೆಬ್ಬಿಸಿ ಕಳಿಸಿದ್ದೇವೆ. ನಿಮ್ಮ ಕಾಯಿದೆಗೆ ಕಿಮ್ಮತ್ತಿಲ್ಲ ಎಂದು ಹೇಳಿದರು.
ಇದನ್ನು ಓದಿದ್ದೀರಾ? ನಾಲ್ಕನೇ ಟೆಸ್ಟ್ | ಕೈಕೊಟ್ಟ ಬ್ಯಾಟಿಂಗ್: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ ಹೀನಾಯ ಸೋಲು
ಇಂಡಸ್ಟ್ರಿಯಲ್ ಏರಿಯಾ ನೋಟಿಫಿಕೇಶನ್ ಮಾಡಿದರೆ ಹಳ್ಳಿ ಜನ ಎಲ್ಲೋಗಬೇಕು. ಅಲ್ಲಿನ ಜನ ವಿಷ ಗಾಳಿ ಕುಡಿಯಬೇಕಾ? ಈ ನೋಟಿಫಿಕೇಶನ್ ಮಾಡುವ ಮೊದಲು ಪರಿಸರದ ಅನುಮತಿ ಪಡೆದಿದ್ದರಾ?. ನಿಮ್ಮ ಜಮೀನು ಪಡೆದರೆ ಎಷ್ಟು ಜಮೀನು ಇದೆಯೋ ಅಷ್ಟು ಜಮೀನು ರೈತರಿಗೆ ಕೊಡಬೇಕು. ಪುನರ್ವಸತಿ ಎಲ್ಲಿ ಕೊಡುತ್ತೀರಾ? ಅಷ್ಟು ಸಾವಿರ ಎಕರೆ ಜಾಗ ಎಲ್ಲಿ ಗುರುತಿಸಿದ್ದೀರಾ? ಇದನ್ನ ತೋರಿಸಿ ಇಲ್ಲವಾದಲ್ಲಿ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಗುಡುಗಿದರು.
ಇಲ್ಲಿನ ಮಂತ್ರಿ ಮುನಿಯಪ್ಪ ರೈತರ ಭೂಸ್ವಾಧೀನ ಕೈಬಿಡಿ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಅಧಿಕೃತ ಪತ್ರವನ್ನು ಸರಕಾರಕ್ಕೆ ಹೊರಡಿಸಬೇಕು. ಮುನಿಯಪ್ಪ ಅವರು ಮಾಡುತ್ತಾರೆ ಎಂಬ ನಂಬಿಕೆ ಇದೆ. ಅಷ್ಟು ಸುಲಭವಾಗಿ ಹೋರಾಟ ಕೈಬಿಡಲು ಸಾಧ್ಯವಿಲ್ಲ. ಆಗಿನ ಮಂತ್ರಿಗೆ ಚಿಕ್ಕಬಳ್ಳಾಪುರ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಅವರು ಮತ್ತೆ ಸುತ್ತಾಡಿ ಎಂಪಿ ಆಗಿದ್ದಾರೆ. ಈಗ ಅವರು ರೈತರ ಪರ ಇದ್ದೇನೆ ಎಂದು ಅಲ್ಲೆಲ್ಲೋ ಹೇಳಿದ್ದಾರೆ. ಆದರೆ, ಅವರಿಗೆ ಇಲ್ಲಿ ಬಂದು ಹೇಳಲು ಧೈರ್ಯ ಇಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.
“ತಾಕತ್ತಿದ್ದರೆ ಎಲ್ಲ ಜನರಿಗೆ ನೋಟಿಸ್ ಕೊಡಿ. ತಾಕತ್ತಿದ್ದರೆ ನಿಮ್ಮ ನಿಲುವನ್ನ ಹೀಗೆ ಮುಂದುವರಿಸಿ. ನಮ್ಮ ಜನರ ಉತ್ತರ ಏನು ಎಂಬುದು ನಿಮಗೆ ಮುಂದೆ ತಿಳಿಯಲಿದೆ. ಈ ಹೋರಾಟ ಕೇವಲ ಚನ್ನರಾಯಪಟ್ಟಣದ ಕಥೆಯಲ್ಲ. ಒಬ್ಬ ರೈತ ಮನಸ್ಸು ಮಾಡಿದರೆ ಇಡೀ ದೇಶದಲ್ಲಿ ಏನು ಬೇಕಾದರೂ ಮಾಡಬಲ್ಲರು. ಹಾಗಾಗಿ ನಿಮ್ಮ ಹೋರಾಟ ಮುಂದುವರೆಯಬೇಕು. ನಿಮಗೆ ಕಾನೂನಿನ ಬಲ ಇದೆ. ಸಂವಿಧಾನ ಇದೆ. ನಿಮ್ಮ ಹೋರಾಟ ನ್ಯಾಯಯುತವಾಗಿದೆ” ಎಂದು ಹುರಿದುಂಬಿಸಿದರು.

“ನಿಮ್ಮ ಹೋರಾಟ ಸದಾ ಹೀಗೆ ಮುಂದುವರೆಯಲಿ. ನಿಮ್ಮೊಟ್ಟಿಗೆ ನಾವಿದ್ದೇವೆ. ಶಾಂತಿಯುತ ಧರಣಿ ಮಾಡುವಾಗ, ಕಾಲ್ನಡಿಗೆ ಮಾಡುವಾಗ ಪೊಲೀಸರು ನಿಮಗೆ ರಕ್ಷಣೆ ಮಾಡುವುದಷ್ಟೇ ಅವರ ಕೆಲಸ. ಆದರೆ ನಿಮ್ಮ ಹೋರಾಟ ನಿಲ್ಲಿಸಲು ಯತ್ನಿಸಿದರೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಎರಡು ಹಳ್ಳಿಗಳು ಹೆದರುವ ಅಗತ್ಯವಿಲ್ಲ. ನೀವೆಲ್ಲರೂ ಒಟ್ಟಿಗೆ ಹೋರಾಟ ಮಾಡಿ. ನಿಮ್ಮ ಪರ ಮಾಧ್ಯಮ ಸಂಸ್ಥೆಗಳು ಇವೆ. ನಿಮ್ಮ ಹೋರಾಟ ಮುಂದುವರಿಯಲಿ” ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಿಲಿಂಡರ್ ಸ್ಫೋಟ, ಹೊತ್ತಿ ಉರಿದ ಲಾರಿಗಳು
ಧರಣಿ ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ದಸಂಸ ತಿಮ್ಮರಾಯಪ್ಪ, ನಾರಾಯಣಸ್ವಾಮಿ, ವೈಜ್ಞಾಪ್ಪ, ಮುನಿಸ್ವಾಮಿ, ವೆಂಕಟೇಶ್, ನಾರಾಯಣಪ್ಪ, ಚಂದ್ರಶೇಖರ್, ಬಿ ಎನ್ ಕೃಷ್ಣಪ್ಪ, ನಾಗರಾಜು, ಲಕ್ಷ್ಮಿ, ಚುಕ್ಕಿ ನಂಜುಂಡಸ್ವಾಮಿ, ಪ್ರಾಂತ ರೈತ ಸಂಘದ ಚಂದ್ರಶೇಖರ್, ಹಿರಿಯರು, ಬರಹಗಾರರು ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಶ್ರೀಪಾದ್ ಭಟ್ಟ, ನಾಗರಾಜ್, ರಕ್ಷಣಾ ವೇದಿಕೆಯ ಚಂದ್ರಣ್ಣ, ಬಿಎಸ್ಪಿ ರಾಮಾಂಜಿನಪ್ಪ, ಹಾಪ್ ಕಾಮ್ಸ್ ನಿರ್ದೇಶಕ ವೆಂಕಟೇಶ್, ನಂಡಗುಂದ ವೆಂಕಟೇಶ್, ಲಕ್ಷ್ಮಿ ವೆಂಕಟೇಶ್, ದಸಂಸ ಜಿಲ್ಲಾ ಸಂಚಾಲಕ ಕೊರದುರು ಶ್ರೀನಿವಾಸ್, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಜೇ ಹಳ್ಳಿ ನಾರಾಯಣಸ್ವಾಮಿ, ವಾಸವಿ, ಪೀಲ್ಡಿ ಬ್ಯಾಕ್ ನಿರ್ದೇಶಕ ಜಯರಾಂ ಗೌಡ ಹಾಗೂ ಇತರರು ಇದ್ದರು.
