ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಹಣದ ಆಸೆ ಆಮಿಷವೊಡ್ಡಿ ಮತದಾರರನ್ನು ದಿಕ್ಕು ತಪ್ಪಿಸುವ ಬಂಡವಾಳಶಾಹಿ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಪಕ್ಷದ ನಾಯಕರಿಂದ ಬಾಗೇಪಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ಸಿಪಿಐ(ಎಂ) ತಾಲೂಕು ಸಮಿತಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ, ಬಡವರ ಮೇಲಿನ ದೌರ್ಜನ್ಯ, ಸಾಗುವಳಿ ಚೀಟಿ ವಿತರಣೆಯಲ್ಲಿ ತಾರತಮ್ಯ, ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳ ದುರಸ್ಥಿಗಾಗಿ, ಲಂಚಾವತಾರ, ಕೃಷಿಕರ, ಕೂಲಿ ಕಾರ್ಮಿಕರ ಸಮಸ್ಯೆಗಳು, ಪಡಿತರ ವ್ಯವಸ್ಥೆ, ಶಿಕ್ಷಣ, ಮನೆ, ನಿವೇಶನ ಹಂಚಿಕೆ ಸೇರಿದಂತೆ ಇತರೆ ಮೂಲ ಸೌಕರ್ಯಗಳ ನೀಡುವಲ್ಲಿ ವಿಫಲವಾಗಿವೆ. ಇದರ ಆಧಾರದಲ್ಲಿ ತೆಗೆದುಕೊಂಡಿರುವ 24 ಅಂಶಗಳನ್ನೊಳಗೊಂಡಿರುವ ನಿರ್ಣಯಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಿಪಿಐ(ಎಂ) ಪಕ್ಷ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಶಾಸಕರು ಹಾಗೂ ತಹಶೀಲ್ದಾರ್ ಅವರು ಭೂ ಮಂಜೂರಾತಿ ಸಮಿತಿ ಸಭೆ ಅಯೋಜಿಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿರುವ ಕಾರಣ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿ ಜನರು ಹೈರಾಣರಾಗಿದ್ದು, ರಸ್ತೆ ದುರಸ್ಥಿಗೆ ಮುಂದಾಗಬೇಕಿದೆ. ಸರ್ಕಾರಿ ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ಹಾಗೂ ಸೇವಾ ಭಧ್ರತೆ ಕಲ್ಪಿಸಬೇಕು, ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಭವಿಸಿರುವ ವೈದ್ಯರ ಕೊರತೆಯನ್ನು ನೀಗಿಸಿ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಾಂಜಾ ಅಕ್ರಮ ಮಾರಾಟಕ್ಕೆ ಪೊಲೀಸರು ಕಡಿವಾಣ ಹಾಕಿ ಗಾಂಜಾ ಮಾರಾಟಗಾರರ ನುಸುಳುಗಾರಿಕೆಯನ್ನು ತಡೆಯಬೇಕು. ಕ್ಷೇತ್ರದಲ್ಲಿ ತಾಂಡವಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಾತನಾಡುವ ಶಕ್ತಿ ಇಲ್ಲದ ಕಾರಣ ಬಂಡವಾಳಶಾಹಿ ಕಾಂಗ್ರೆಸ್ ಪಕ್ಷದ ಶಾಸಕರು ಆಡಳಿತ ಯಂತ್ರಾಂಗದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮತ್ತೊಂದು ಕಡೆ ಕೋಮುವಾದಿ ಬಿಜೆಪಿ ಪಕ್ಷದ ಮುಖಂಡರು ವಿಫಲರಾಗಿದ್ದು, ಕ್ಷೇತ್ರದ ಅಭಿವೃದ್ದಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸಿಪಿಐ(ಎಂ) ಪಕ್ಷ ಹಮ್ಮಿಕೊಳ್ಳುವ ಹೋರಾಟಗಳನ್ನು ಜನರು ಬೆಂಬಲಿಸಿ ನಮ್ಮೊಂದಿಗೆ ಕೈ ಜೋಡಿಸಿ ಎಂದು ಮನವಿ ನೀಡಿದರು.
ಕೂಲಿಕಾರರ ಸಂಘದ ತಾಲೂಕು ಕಾರ್ಯದರ್ಶಿ ಕೆ.ನಾಗರಾಜು ಮಾತನಾಡಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಗೇಪಲ್ಲಿ ತಾಲೂಕಿನ 14 ಸಾವಿರ ರೈತರು ಬೆಳೆ ಪರಿಹಾರದಿಂದ ವಂಚಿತರಾಗಿದ್ದಾರೆ. ಇಲಾಖೆ ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು.
ನ.21, 22ರಂದು 18ನೇ ಜಿಲ್ಲಾ ಸಮ್ಮೇಳನ:
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸಿಪಿಐ(ಎಂ) ತೆಗೆದುಕೊಂಡಿರುವ ನಿರ್ಣಯದಂತೆ ನವೆಂಬರ್ 21 ಮತ್ತು 22 ರಂದು ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐ(ಎಂ) ಪಕ್ಷದ 18ನೇ ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? : ಈ ದಿನ ಸಂಪಾದಕೀಯ | ಒಳ ಮೀಸಲಾತಿ ತೀರ್ಮಾನ: ಹೋರಾಟಕ್ಕೆ ಸಂದ ಜಯ, ಕಾಯಿಸದಿರಲಿ ಸರ್ಕಾರ
ಈ ಸಂದರ್ಭದಲ್ಲಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರಾದ ದೇವಿಕುಂಟೆ ಶ್ರೀನಿವಾಸ್, ಜಿ.ಮುಸ್ತಪಾ, ಪಿ.ಓಬಳರಾಜು, ಸೋಮಶೇಖರ್, ಜಿ.ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ, ರಫೀಕ್ ಮತ್ತಿತರರು ಇದ್ದರು.