ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆಗೆ ಆದೇಶಿಸಲು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹೇಳಿಕೆಗೆ ಸೌಜನ್ಯ ಪ್ರಕರಣದಲ್ಲಿ ಸೌಜನ್ಯ ಕುಟುಂಬದ ಪರವಾಗಿ ವಕಾಯತ್ತು ವಹಿಸಿದ್ದ ವಕೀಲ ಶ್ರೀನಿವಾಸ್ ಅವರು ಪ್ರತಿಕ್ರಿಯೆ ನೀಡಿದ್ದು, “ಪ್ರಕರಣವನ್ನು ಮರುತನಿಖೆಗೆ ನೀಡಲು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅತ್ಯವಿಲ್ಲ” ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಕೀಲ ಶ್ರೀನಿವಾಸ್, “ಮುಖ್ಯಮಂತ್ರಿಗಳು ಕೋರ್ಟ್ ತೀರ್ಪು ಓದುವುದು ಸ್ವಾಗತಾರ್ಹ. ಅವರು ವಕೀಲರಾಗಿದ್ದು, ತೀರ್ಪು ಓದುವುದರಿಂದ ಪ್ರಕರಣದ ಸ್ಪಷ್ಟತೆ ಅವರಿಗೆ ಸಿಗುತ್ತದೆ. ಆದರೆ, ಪ್ರಕರಣವನ್ನು ಮರುತನಿಖೆಗೆ ನೀಡಲು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ. ಅವರು ಖುದ್ದು ಮರುತನಿಖೆಗೆ ಆದೇಶ ನೀಡಬಹುದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
“ಪ್ರಕರಣದಲ್ಲಿ ನಿರಪರಾಧಿ ಸಂತೋಷ್ ರಾವ್ ಅವರನ್ನು ಬಂಧಿಸಿ, ಅವರೇ ತಪ್ಪಿತಸ್ಥರೆಂದು ಸಾಬೀತು ಮಾಡುವುದರ ಸುತ್ತಲೇ ಪೊಲೀಸರು, ತನಿಖಾಧಿಕಾರಿಗಳು ತನಿಖೆ ಮಾಡಿದ್ದಾರೆ. ಆದರೆ, ಸಂತೋಷ್ ನಿರಪರಾಧಿ ಎಂದು ಕೋರ್ಟ್ ಹೇಳಿದೆ. ಸೌಜನ್ಯ ಕುಟುಂಬವೂ ಅದನ್ನೇ 11 ವರ್ಷಗಳಿಂದ ಹೇಳುತ್ತಾ ಬಂದಿದೆ. ಈಗ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆಂದರೆ, ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಸಂತೋಷ್ ವಿರುದ್ಧ ಮತ್ತೆ ತನಿಖೆ ನಡೆಸಬೇಕು ಎಂದಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
“ಸಂತೋಷ್ ನಿರಪರಾಧಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ, ಅದು ಸಿಬಿಐ ಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಆಗುತ್ತದೆ. ಆಗ ಪ್ರಕರಣದ ವಿಚಾರಣೆ ಮತ್ತೆ ಸಂತೋಷ್ ಸುತ್ತಲೇ ನಡೆಯುತ್ತದೆ. ಈಗಾಗಲೇ 11 ವರ್ಷ ನೋವುಂಡಿರುವ ಸಂತೋಷ್‌ಗೆ ಮತ್ತಷ್ಟು ನೋವು ಕೊಟ್ಟಂತಾಗುತ್ತದೆ. ಈ ಪ್ರಕರಣದಲ್ಲಿ ಆಗಬೇಕಿರುವುದು ನಿಜವಾದ ಅಪರಾಧಿಗಳನ್ನು ಹಿಡಿದು, ತನಿಖೆ ನಡೆಸಿ, ಶಿಕ್ಷೆಗೆ ಗುರಿಪಡಿಸುವುದು. ಅದಕ್ಕಾಗಿ, ಪ್ರಕರಣವನ್ನು ಮತ್ತೆ ಮೊದಲಿನಿಂದ ತನಿಖೆ ನಡೆಸಬೇಕು. ನಿಜವಾದ ಅಪರಾಧಿಗಳನ್ನು ಬಂಧಿಸಬೇಕು. ಅದಕ್ಕಾಗಿ ಸರ್ಕಾರ ಮರುತನಿಖೆಗೆ ಆದೇಶಿಸಬೇಕು. ಇದಕ್ಕೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ” ಎಂದು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸೌಜನ್ಯ ಪ್ರಕರಣ ಮರುತನಿಖೆ | ಮೇಲ್ಮನವಿ ಸಲ್ಲಿಸುವ ಕುರಿತು ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ, “ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರುತನಿಖೆಗೆ ನೀಡಬೇಕೆಂದು ಸೌಜನ್ಯ ಅವರ ಪೋಷಕರು ಹಾಗೂ ಹೋರಾಟಗಾರರು ಒತ್ತಾಯಿಸಿದ್ದಾರೆ. ಪ್ರಕರಣವು ಸಿಬಿಐ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಪ್ರಕರಣವನ್ನು ಮರುತನಿಖೆಗೆ ನೀಡಬೇಕೆಂದರೆ ಕಾನೂನಿನ ಪ್ರಕಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಸಿಬಿಐ ಕೋರ್ಟ್‌ನ ತೀರ್ಪು ಓದಿದ ನಂತರ, ಮೇಲ್ಮನವಿ ಸಲ್ಲಿಸುವ ಕುರಿತು ಪರಿಶೀಲನೆ ನಡೆಸುತ್ತೇವೆ” ಎಂದು ಹೇಳಿದ್ದರು.