ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನಲ್ಲಿ ಅಕ್ರಮವಾಗಿ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ(ಆ.11) ಕೂಡ ಉತ್ಖನನ ಪ್ರಕ್ರಿಯೆಯನ್ನು ಮುಂದುವರಿಸಲು ಎಸ್‌ಐಟಿ ಮುಂದಾಗಿದೆ.
ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಎಸ್‌ಐಟಿ ಅಧಿಕಾರಿಗಳು ಜಿಪಿಎಸ್ ಡ್ರೋನ್ ಯಂತ್ರ ಬಳಸಲು ಮುಂದಾಗಿದ್ದಾರೆ.
ಈ ಬಗ್ಗೆ ಸ್ಥಳದಿಂದ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿರುವ ನಮ್ಮ ಪ್ರತಿನಿಧಿ ಭೀಮಾ ನಾಯ್ಕ್, “ಸಾಕ್ಷಿ ದೂರುದಾರ ಗುರುತಿಸಿದ್ದ ಈವರೆಗಿನ ಯಾವುದೇ ಸ್ಥಳದಲ್ಲಿ ಜಿಪಿಎಸ್ ತಂತ್ರಜ್ಞಾನವನ್ನು ಎಸ್‌ಐಟಿ ಬಳಸಿಲ್ಲ. ಸೋಮವಾರ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಬರುವಾಗ ಜಿಪಿಎಸ್ ಯಂತ್ರವನ್ನು ತಂದಿದ್ದಾರೆ. ಅದರ ಫಲಿತಾಂಶದ ಆಧಾರದ ಮೇಲೆ ಉತ್ಖನನ ನಡೆಸುವುದಕ್ಕೆ ಮುಂದಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಹಲವಾರು ವಿದ್ಯುತ್ ಕಂಬಗಳ ಸಹಿತ ಹಲವು ಅಡಚಣೆಗಳಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಜಿಪಿಎಸ್ ಯಂತ್ರ ಬಳಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಜಿಪಿಎಸ್ ತಂತ್ರಜ್ಞಾನದ ಬಳಕೆ ಸಾರ್ವಜನಿಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವ್ಯಾಪಕ ಚರ್ಚೆಗೆ ಕಾರಣವಾದ ಕಾಂಗ್ರೆಸ್‌ನ ಮಾಜಿ ಸಂಸದ ಜನಾರ್ಧನ ಪೂಜಾರಿ ಹೇಳಿಕೆ
ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 10ರಂದು ಯಾವುದೇ ಕಾರ್ಯಾಚರಣೆ ನಡೆದಿರಲಿಲ್ಲ. ಆ. 9ರಂದು ಧರ್ಮಸ್ಥಳದ ಬಾಹುಬಲಿ ಬೆಟ್ಟದ ಸಮೀಪ ಶೋಧ ನಡೆದಿತ್ತು. ಬಾಹುಬಲಿ ಅರಣ್ಯದಲ್ಲಿ 16 ಮತ್ತು 16-ಅ ಗುರುತು ಮಾಡಿದ ಎರಡು ಜಾಗದಲ್ಲಿ ಕಾರ್ಯಾಚರಣೆ ನಡೆದಿತ್ತು. ಆದರೆ, ಈ ವೇಳೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.
