ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಉಡುಪಿ ನ್ಯಾಯಾಲಯವು ಶನಿವಾರ ಸಂಜೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಮಂಜೂರಾದ ಬೆನ್ನಲ್ಲೇ ಹಿರಿಯಡ್ಕ ಜೈಲಿನಿಂದ ಮಹೇಶ್ ಶೆಟ್ಟಿ ತಿಮರೋಡಿಯವರು ತಮ್ಮ ಊರಾದ ಉಜಿರೆಗೆ ಬಂದಿದ್ದು ಈ ವೇಳೆ ಉಜಿರೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಇದನ್ನು ಓದಿದ್ದೀರಾ? ಬಿ.ಎಲ್ ಸಂತೋಷ್‌ಗೆ ಅವಹೇಳನ, ಮಹೇಶ್ ಶೆಟ್ಟಿ ತಿಮರೋಡಿ ಬಂಧನ
ಆ ಬಳಿಕ ಉಜಿರೆಯಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, “ಧರ್ಮಸ್ಥಳ ಗ್ರಾಮದಲ್ಲಿ ಆಗಿರುವ ಹಲವಾರು ಅತ್ಯಾಚಾರಗಳ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಎರಡು ದಿನ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ. ಎಸ್‌ಐಟಿ ತನಿಖೆ ನಿಲ್ಲಿಸುವುದಕ್ಕೆ ಮಾಡಿರುವ ಷಡ್ಯಂತ್ರ” ಎಂದು ಹೇಳಿದ್ದಾರೆ.
“ಕಳೆದೆರಡು ದಿವಸಗಳಿಂದ ನಡೆದ ಘಟನೆ ಇಡೀ ರಾಜ್ಯ, ರಾಷ್ಟ್ರ ತಲೆತಗ್ಗಿಸುವಂತದ್ದು. ಯಾವುದೇ ಅಪರಾಧವನ್ನು ಮಾಡದೆಯೇ ಕೆಲವು ಷಡ್ಯಂತ್ರ, ಪಿತೂರಿಗಳಿಂದ ನಮ್ಮನ್ನು ಎರಡು ದಿವಸ ಜೈಲಿನಲ್ಲಿ ಇಡಲಾಯಿತು. ಶ್ರೀ ಕೃಷ್ಣ ಪರಮಾತ್ಮ ಹುಟ್ಟಿದ್ದು ಜೈಲಲ್ಲಿ. ಅಲ್ಲಿಗೆ ಹೋಗಿ ಬಂದದ್ದು ನಮಗೇನೂ ನೋವು ಅನಿಸಿಲ್ಲ. ಯಾಕಂದ್ರೆ ಇವತ್ತು ಶ್ರೀ ಕೃಷ್ಣ ಪರಮಾತ್ಮ ಹೊರಗೆ ಬಂದಾಗಿದೆ. ಮುಂದಿನ ದಿನಗಳಲ್ಲಿ ದುಷ್ಟರ ಸಂಹಾರ ಖಂಡಿತ ನಡೆಯುತ್ತದೆ” ಎಂದರು.
“ನಾವು ಇಷ್ಟರವರೆಗೂ ಯಾವುದೇ ಸಮಾಜ, ವ್ಯಕ್ತಿಗಳು, ಧರ್ಮದ ವಿರುದ್ಧ ನಾವು ಮಾತನಾಡಿದವರಲ್ಲ. ಬರೀ ಧರ್ಮಸ್ಥಳ ಗ್ರಾಮದಲ್ಲಿ ನಡೆದಂತಹ ಅತ್ಯಾಚಾರಿಗಳ ದಮನ ಆಗಬೇಕು, ಅತ್ಯಾಚಾರಿಗಳು ಯಾರು ಎಂಬುದು ತಿಳಿಯಬೇಕು ಎಂಬ ದೃಷ್ಟಿಯಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇವತ್ತು ರಾಜಕೀಯದವರು ಅತ್ಯಾಚಾರಿಗಳ ಕೈಯಾಳುಗಳಾಗಿದ್ದಾರೆ” ಎಂದು ದೂರಿದರು.
“ಕೆಲವೇ ಕೆಲವು ರಾಜಕೀಯ ವ್ಯಕ್ತಿಗಳ ಪಿತೂರಿಯಿಂದ ಆದಂತಹ ಒಂದು ದಿನದ ನಾಟಕ, ಬಂಧನದ ಯಾತ್ರೆ ಇಲ್ಲಿಗೆ ಮುಕ್ತಾಯವಾಗಿದೆ. ಸದ್ಯ ಈ ವಿಚಾರವನ್ನು ಎಲ್ಲೆಲ್ಲೋ ಕೊಂಡೊಯ್ಯಲಾಗುತ್ತಿದೆ. ಎಸ್‌ಐಟಿ ತನಿಖೆಯನ್ನು ನಿಲ್ಲಿಸಲೆಂದೇ ಈ ಷಡ್ಯಂತ್ರ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.
“ಅತ್ಯಾಚಾರಿಗಳ ಪರವಾಗಿ ಇರುವವರು ಏನೇ ಹೇಳಿದರೂ ನಾವು ತಾಳ್ಮೆಯಿಂದ ಇರಬೇಕು. ನ್ಯಾಯ ಸಿಗುವವರೆಗೂ ನಾವು ಸುಮ್ಮನಿರಬೇಕು. ಶೀಘ್ರವೇ ಧರ್ಮಸ್ಥಳ ಪ್ರಕರಣದ ಬಗ್ಗೆ ಒಳ್ಳೆಯ ರೀತಿ ತೀರ್ಮಾನ ಬಂದೇ ಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
