ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ತೋರಿಸಿಕೊಟ್ಟಿರುವ ನೇತ್ರಾವತಿ ಸ್ನಾನಘಟ್ಟದ ಸಮೀಪ ಎಸ್ಐಟಿ ಕಳೆದ ಮೂರು ದಿನಗಳಿಂದ ಉತ್ಖನನ ನಡೆಸುತ್ತಿದೆ. ಮೂರನೇ ದಿನವಾದ ಗುರುವಾರ ಕೆಲವು ಮೂಳೆಗಳು ಪತ್ತೆಯಾಗಿದೆ.
ಈ ನಡುವೆ ಉತ್ಖನನದ ಮೊದಲ ದಿನದಂದು ಗುರುತಿಸಲಾಗಿದ್ದ ಮೊದಲನೇ ಸ್ಥಳದಲ್ಲಿ ಪತ್ತೆಯಾಗಿದ್ದ ಡೆಬಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ವಿವರಗಳನ್ನು ಪತ್ತೆ ಹಚ್ಚುವಲ್ಲಿ ಎಸ್‌ಐಟಿ ಅಧಿಕಾರಿಗಳು ಸಫಲರಾಗಿರುವುದಾಗಿ ಮೂಲಗಳು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದೆ.
ಮಂಗಳವಾರ ಸ್ಪಾಟ್ 1 ರಲ್ಲಿ ಪಾನ್ ಕಾರ್ಡ್ ಪತ್ತೆಯಾದ ವ್ಯಕ್ತಿಯ ಕುಟುಂಬವನ್ನು ಎಸ್‌ಐಟಿ ಪತ್ತೆ ಹಚ್ಚಿದೆ. ಸಿಕ್ಕಿದ್ದ ಪಾನ್ ಕಾರ್ಡ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸುರೇಶ್ ಎಂಬ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ.
ಸುರೇಶ್ ಎಂಬ ವ್ಯಕ್ತಿ ಕಳೆದ ಮಾರ್ಚ್ 2025ರಲ್ಲಿ ನೆಲಮಂಗಲ ತಾಲೂಕಿನಲ್ಲಿರುವ ತನ್ನ ಹುಟ್ಟೂರಿನಲ್ಲಿ ಕಾಮಾಲೆ ರೋಗದಿಂದ ನಿಧನರಾಗಿದ್ದು, ಊರಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಿರುವುದನ್ನು ಕೂಡ ಎಸ್‌ಐಟಿ ದೃಢಪಡಿಸಿದೆ. ಅಲ್ಲದೇ, ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಲು ಕೆಲವು ಎಸ್‌ಐಟಿ ಅಧಿಕಾರಿಗಳು ಸುರೇಶ್ ಅವರ ಮನೆಗೆ ಭೇಟಿ ನೀಡಿದ್ದು, ಮೃತರ ತಂದೆಯೂ ಇದನ್ನು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರು ಮದ್ಯವ್ಯಸನಿಗಳಾಗಿದ್ದರು ಎಂದು ಎಸ್‌ಐಟಿ ತನಿಖೆಯ ವೇಳೆ ತಿಳಿದುಬಂದಿದ್ದು, ಅವರು ಸಾಯುವುದಕ್ಕೂ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ಪಾನ್ ಕಾರ್ಡ್ ಕಳೆದುಕೊಂಡಿರಬಹುದು ಎಂದು ಎಸ್‌ಐಟಿ ಶಂಕಿಸಿರುವುದಾಗಿ ಮೂಲಗಳು ತಿಳಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಮೂಳೆ ಪತ್ತೆಯ ಬಳಿಕ ತಾತ್ಕಾಲಿಕ ಶೆಡ್ ನಿರ್ಮಾಣ; ಉತ್ಖನನ ಮುಂದುವರಿಸಿದ ಎಸ್‌ಐಟಿ
ಅಲ್ಲದೇ, ಈ ಪಾನ್ ಕಾರ್ಡ್ ಮಾತ್ರವಲ್ಲದೇ ಮೊದಲ ದಿನದ ಉತ್ಖನನದ ವೇಳೆ ಒಂದು ಡೆಬಿಟ್ ಕಾರ್ಡ್ ಕೂಡ ಪತ್ತೆಯಾಗಿತ್ತು. ಇದನ್ನೂ ಕೂಡ ಎಸ್‌ಐಟಿ ಪರಿಶೀಲಿಸಿದ್ದು, ಅದು ಸುರೇಶ್ ಅವರ ತಾಯಿಗೆ ಸೇರಿದ್ದೆಂದು ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿದೆ.
ಸಿಕ್ಕಿರುವ ಡೆಬಿಟ್ ಕಾರ್ಡ್ ಸುರೇಶ್ ಅವರ ತಾಯಿಗೆ ಸೇರಿದ್ದು ಎಂದು ಖಚಿತಪಡಿಸಿದ್ದು, ಅವರು ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂಬುದನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಖಚಿತಪಡಿಸಿಕೊಂಡಿರುವುದಾಗಿ ಈದಿನ ಡಾಟ್ ಕಾಮ್‌ಗೆ ಮೂಲಗಳು ತಿಳಿಸಿದೆ.
