ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಬಳಿಯ ಬಂಗ್ಲೆಗುಡ್ಡೆದಲ್ಲಿ ಶುಕ್ರವಾರವೂ ಅಸ್ಥಿಪಂಜರಕ್ಕಾಗಿ ತೀವ್ರ ಶೋಧ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳು ನಡೆಸಿದರು.
ಸಾಕ್ಷಿ ದೂರುದಾರ ಕಾಡಿನಲ್ಲಿ ತೋರಿಸಿದ 7 ಮತ್ತು8 ನೇ ಜಾಗವನ್ನು ವೈದ್ಯರು, ಎಫ್‌ಎಸ್‌ಎಲ್, ಅರಣ್ಯ, ಪೊಲೀಸ್ ಸೇರಿದಂತೆ ಹಲವು ಅಧಿಕಾರಗಳ ಸಮ್ಮುಖದಲ್ಲಿ ಎಸ್‌ಐಟಿ ತಂಡದವರು ಭೂಮಿಯನ್ನು ಅಗೆಯಿಸಿದ್ದಾರೆ. ಎಸ್‌ಐಟಿ ತಂಡದ ಜತೆಗೆ 20ಕ್ಕೂ ಹೆಚ್ಚು ಕಾರ್ಮಿಕರು ಹಾರೆ, ಗುದ್ದಲಿಯೊಂದಿಗೆ ಅನಾಮಿಕ ಗುರುತು ಮಾಡಿದ್ದ ಜಾಗಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಭೂಮಿಯನ್ನು ಅಗೆಯಲು ಜೆಸಿಬಿಯನ್ನು ಕೂಡ ಕಾಡಿನೊಳಗೆ ಕೊಂಡೊಯ್ಯಲಾಗಿತ್ತು.
ನೇತ್ರಾವತಿ ನದಿ ಪಕ್ಕದಲ್ಲಿ ಅನಾಮಿಕ ವ್ಯಕ್ತಿ ತೋರಿಸಿದ 7 ಮತ್ತು 8ನೇ ಪಾಯಿಂಟ್‌ನಲ್ಲಿ ಸ್ಥಳ ಅಗೆದ ಸಂದರ್ಭದಲ್ಲಿ ಇದುವರೆಗೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿರುವುದಿಲ್ಲ ಎಂದು ಖಚಿತ ಮೂಲಗಳು ಈ ದಿನ.ಕಾಮ್‌ಗೆ ಮಾಹಿತಿ ನೀಡಿದೆ.
ಸ್ಥಳ ಅಗೆಯುವ ವೇಳೆ ಅನಾಮಿಕ ವ್ಯಕ್ತಿ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿಯ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿ ಇದ್ದರು. 7 ಮತ್ತು 8ನೇ ಸ್ಥಳಗಳು ನೇತ್ರಾವತಿ ಸೇತುವೆ ಬಳಿ ಇರುವುದರಿಂದ ಶೋಧನಾ ಸ್ಥಳದಲ್ಲಿ ಬಿಗಿಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಗೆಯುವ ಸ್ಥಳಗಳ ಸುತ್ತ ಹಸಿರು ನೆಟ್ ಅಳವಡಿಸಿ ಕಾರ್ಯಾಚರಣೆ ನಡೆಸಿದರು.
ಧರ್ಮಸ್ಥಳದ ಬಂಗ್ಲೆಗುಡ್ಡೆ ಮತ್ತು ನೇತ್ರಾವತಿ ನದಿಯ ಬಳಿ ಅನಾಮಿಕ ವ್ಯಕ್ತಿ ಒಟ್ಟು 13 ಜಾಗಗಳನ್ನು ಗುರುತಿಸಿದ್ದಾನೆ. ಅವುಗಳಲ್ಲಿ ಈಗಾಗಲೇ ಒಟ್ಟು 8 ಜಾಗಗಳನ್ನು ಅಗೆಯಲಾಗಿದೆ. ಆತ ತೋರಿಸಿದ್ದ 6ನೇ ಜಾಗದಲ್ಲಿ ಗುರುವಾರ ಕೆಲವೊಂದು ಮೂಳೆಗಳು ಪತ್ತೆಯಾಗಿತ್ತು. ಉಳಿದಂತೆ ನಡೆಸಿದ್ದ ಏಳು ಜಾಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
ಗ್ರಾಮ ಪಂಚಾಯತ್‌ನಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಎಸ್‌ಐಟಿ
ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಶುಕ್ರವಾರ ಸಂಜೆ ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ 1995 ರಿಂದ 2014ರ ವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಖಚಿತ ಮೂಲಗಳು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದೆ.
ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ್ದ ಧರ್ಮಸ್ಥಳದ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಅವರು, “ನಮ್ಮಲ್ಲಿ ಎಲ್ಲ ಅಪರಿಚಿತ ಶವಗಳ ಸಂಸ್ಕಾರ ಮಾಡಿರುವ ದಾಖಲೆಗಳಿವೆ. ಅವುಗಳನ್ನು ಎಸ್‌ಐಟಿ ಅಧಿಕಾರಿಗಳು ಕೇಳಿದಲ್ಲಿ ನೀಡುತ್ತೇವೆ ಎಂದು ತಿಳಿಸಿದ್ದೆವು. ಇಂದು ಬಂದು ತೆಗೆದುಕೊಂಡು ಹೋಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಪೊಲೀಸರಿಂದ 15 ವರ್ಷಗಳ ಅಸ್ವಾಭಾವಿಕ ಸಾವುಗಳ ದಾಖಲೆ ನಾಶ!
ಶುಕ್ರವಾರದ ಕಾರ್ಯಾಚರಣೆ ಅಂತ್ಯಗೊಳಿಸಿದ್ದು, ಶನಿವಾರ 9ನೇ ಪಾಯಿಂಟ್‌ನಿಂದ ಕಾರ್ಯಾಚರಣೆ ಮುಂದುವರಿಯಲಿದೆ. ಇವುಗಳಲ್ಲಿ ಯಾವುದಾದರೂ ಅಸ್ಥಿಪಂಜರಗಳು ಲಭ್ಯವಾಗಲಿದೆಯೇ ಎಂದು ಕಾದುನೋಡಬೇಕಿದೆ.