ಧರ್ಮಸ್ಥಳ ನೇತ್ರಾವತಿ ನದಿ ಪರಿಸರದಲ್ಲಿ ಹಲವರ ದೇಹಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ದೂರು ಆಧರಿಸಿ ತನಿಖೆ ಶುರು ಮಾಡಿರುವ ಎಸ್‌ಐಟಿ, ಮೂರನೇ ದಿನದ ಉತ್ಖನನದ ಆರನೇ ಸ್ಥಳದಲ್ಲಿ ಅಗೆದಾಗ ಮಾನವ ದೇಹದ ಕೆಲ ಮೂಳೆಗಳು ಸಿಕ್ಕಿರುವುದು ಖಚಿತವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಉತ್ಖನನದ ಸ್ಥಳಕ್ಕೆ ಹಸಿರು ಪರದೆ ಹಾಕಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಸದ್ಯ ಅಗೆತದ ವೇಳೆ ಸಿಕ್ಕಿರುವ ಮೂಳೆಗಳು ಸೊಂಟದ ಕೆಳಭಾಗದವು ಎಂದು ಎಸ್‌ಐಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಗೆಯುವ ಕೆಲಸ ಮುಂದುವರಿಸಲಾಗಿದೆ. ಅವಶೇಷ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ತಜ್ಞರು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಡಾಗ್ ಸ್ಕ್ವಾಡ್ ಅನ್ನು ಕೂಡ ಕರೆಸಲಾಗಿದೆ.
ಮೂಳೆ ಸಿಕ್ಕ ವಿಚಾರವನ್ನು ಹಲವು ಮಾಧ್ಯಮಗಳು ನೇರಪ್ರಸಾರ ಮಾಡುತ್ತಿರುವುದರಿಂದ ಹಸಿರು ಪರದೆ ಹಾಕಿ, ಕಾರ್ಮಿಕರಿಂದಲೇ ಅಗೆಯುವ ಕೆಲಸವನ್ನು ಮುಂದುವರೆಸಲಾಗಿದೆ.
ಕರಾವಳಿಯಲ್ಲಿ ನಿರಂತರವಾಗಿ ಮಳೆಯೂ ಸುರಿಯುತ್ತಿದೆ. ಇದು ಸ್ವಲ್ಪಮಟ್ಟಿಗೆ ಉತ್ಖನನ ಕಾರ್ಯಕ್ಕೆ ಸಮಸ್ಯೆ ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ಖನನದ ಆರನೇ ಸ್ಥಳದ ಪಕ್ಕದಲ್ಲೇ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಎಸ್‌ಐಟಿ ತಂಡ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಿಕಪ್ ಮೂಲಕ ಕಬ್ಬಿಣದ ಕಂಬಿ, ತಗಡು ಶೀಟು ಸೇರಿದಂತೆ ಹೆಚ್ಚುವರಿ ಕಾರ್ಮಿಕರನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿಯ ಮತಗಳ್ಳತನವನ್ನು ಜನರ ಗಮನಕ್ಕೆ ತರಲು ರಾಹುಲ್ ಗಾಂಧಿ ಬರುತ್ತಿದ್ದಾರೆ: ಡಿ ಕೆ ಶಿವಕುಮಾರ್
ಸದ್ಯ ಕೆಲವೊಂದು ಮೂಳೆ ಸಿಕ್ಕಿರುವುದರಿಂದ ಇಂದು ಉತ್ಖನನ ಕಾರ್ಯವನ್ನು ರಾತ್ರಿಯೂ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 6ನೇ ಪಾಯಿಂಟ್‌ನಲ್ಲಿ ಮೂಳೆ ಸಿಕ್ಕ ವಿಚಾರ ತಿಳಿಯುತ್ತಿದ್ದಂತೆಯೇ ಕುತೂಹಲಿಗರ ಸಂಖ್ಯೆಯೂ ಜಾಸ್ತಿಯಾಗಿದೆ. ಹಲವು ಮಂದಿ ನೇತ್ರಾವತಿ ನದಿಯಲ್ಲಿರುವ ಸೇತುವೆ ಮೇಲೆ ನಿಂತು ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ.



