ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ಧರ್ಮಸ್ಥಳದ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಧರ್ಮಸ್ಥಳ ವಿರುದ್ದ ಅಪಪ್ರಚಾರ ಅರೋಪ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆಯಿದ್ದ ಸಮೀರ್‌ಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿ, ಆದೇಶಿಸಿದೆ.
ನ್ಯಾಯವಾದಿ ಸಿರಾಜುದ್ದೀನ್ ಮೂಲಕ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಂ ಡಿ ಸಮೀರ್ ನಿರೀಕ್ಷಣಾ ಜಾಮೀನು ಕೋರಿದ್ದರು. ಸದ್ಯ ನ್ಯಾಯಾಲಯ ಜಾಮೀನು ನೀಡಿದೆ.
ಮನೆ ಸುತ್ತುವರಿದಿದ್ದ ಪೊಲೀಸರು
ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ ಖಾಕಿ ಪಡೆ ಸುತ್ತುವರಿದಿದ್ದರು. ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿತ್ತು.
ಆ ಬಳಿಕ ಮನೆಯನ್ನು ಶೋಧಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಸಮೀರ್ ತಾಯಿ ಸಕಾರಾತ್ಮಕವಾಗಿ ಸ್ಪಂದಿಸಿ ಮನೆಯೆಲ್ಲ ತೋರಿಸಿದ್ದರು.
ಇದನ್ನು ಓದಿದ್ದೀರಾ? ಬಿ.ಎಲ್ ಸಂತೋಷ್‌ಗೆ ಅವಹೇಳನ, ಮಹೇಶ್ ಶೆಟ್ಟಿ ತಿಮರೋಡಿ ಬಂಧನ
ಸಮೀರ್ ಮನೆ ಮುಂದೆ ಬೆಳಿಗ್ಗೆಯಿಂದಲೇ ಜಮಾಯಿಸಿದ್ದ ಪೊಲೀಸರ ಬಳಿ ಆತನ ಮನೆ ಶೋಧಿಸಲು ಸರ್ಚ್ ವಾರೆಂಟ್ ಇರಲಿಲ್ಲ. ಅಲ್ಲದೆ, ಸಮೀರ್‌ನನ್ನು ಬಂಧಿಸಲು ಅರೆಸ್ಟ್ ವಾರೆಂಟ್ ಕೂಡ ಪೊಲೀಸರ ಬಳಿ ಇರಲಿಲ್ಲ ಎಂಬುದಾಗಿ ಸಮೀರ್ ತಾಯಿ ಮತ್ತು ಸಮೀರ್ ಪರ ವಕೀಲರು ಈದಿನ.ಕಾಂಗೆ ತಿಳಿಸಿದ್ದಾರೆ.
ಈ ನಡುವೆ ಕೆಲವು ಮಾಧ್ಯಮಗಳು ಸಮೀರ್ ಎಂ.ಡಿ. ಪರಾರಿಯಾಗಿದ್ದಾರೆ ಎಂದು ಸುದ್ದಿಗಳನ್ನು ಬಿತ್ತರಿಸಿದ್ದವು. ಇದಕ್ಕೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ನವೀನ್ ಸೂರಿಂಜೆ, “ಸಮೀರ್ ಎಂಡಿ ಪರಾರಿಯಾಗಿಲ್ಲ. ವಿಚಾರಣೆಗೆ ಹಾಜರಾಗಲು ಪೊಲೀಸರಿಗೆ ಲಿಖಿತವಾಗಿ ಸಮಾಯಾವಕಾಶವನ್ನು ಸಮೀರ್ ಕೇಳಿದ್ದರು. 15 ದಿನಗಳ ಕಾಲಾವಕಾಶವನ್ನು ಪೊಲೀಸರು ನೀಡಿದ್ದರು ಕೂಡ ! ಆದರೆ ಇಂದು ಮದ್ಯಾಹ್ನ ಪೊಲೀಸರು ಸಮೀರ್ ಮನೆಗೆ ಸರ್ಚ್ ವಾರೆಂಟ್ ಇಲ್ಲದೆಯೇ ಬಂದಿದ್ದಾರೆ. ನೂರಾರು ಕೊಲೆ, ಅತ್ಯಾಚಾರ ಮಾಡಿದವರು ರಾಜಮರ್ಯಾದೆ ಅನುಭವಿಸುತ್ತಿದ್ದಾರೆ. ಸತ್ಯವನ್ನು ಜನರಿಗೆ ಹೇಳಿದವರನ್ನು ಪೊಲೀಸರು ಬೇಟೆಯಾಡುತ್ತಿದ್ದಾರೆ. ಸಮೀರ್ ಎಂಡಿ ಇಂದು ಅವರ ವಕೀಲರ ಜೊತೆ ನ್ಯಾಯಾಲಯದಲ್ಲಿದ್ದಾರೆ. ಯಾವ ಪರಾರಿಯೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.
