ಧರ್ಮಸ್ಥಳದ ಸೌಜನ್ಯ ಮನೆಯ ಸಮೀಪ ಬಿಗ್‌ಬಾಸ್‌ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮದವರ ಮೇಲೆ ಕೆಲವು ಗೂಂಡಾಗಳು ದಾಳಿ ಮಾಡಿದ ನಂತರ ಹಲವು ಬೆಳವಣಿಗೆಗಳು ನಡೆಯುತ್ತಿದೆ.
ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ಸೌಜನ್ಯ ಪರ ಹೋರಾಟಗಾರರು ಪಾಂಗಳ ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಧರ್ಮಸ್ಥಳದ ಕೆಲವರು ಪೊಲೀಸರ ಮುಂದೆಯೇ ವಾಗ್ವಾದ ನಡೆಸಿದರು. ಈ ವೇಳೆ ಎರಡು ಗುಂಪುಗಳು ಮುಖಾಮುಖಿ ವಾಗ್ವಾದ ನಡೆಸುತ್ತಿದ್ದಂತೆಯೇ ಪೊಲೀಸರು ಲಾಠಿ ಬೀಸುವ ಮೂಲಕ ಗುಂಪನ್ನು ಚದುರಿಸಲು ಯತ್ನಿಸಿದರು. ಆದರೆ, ಈ ವೇಳೆ ಕೆಲವರು ಪೊಲೀಸರನ್ನೇ ದೂಡಿದ್ದಾರೆ.
ಆ ಬಳಿಕ ಸ್ಥಳಕ್ಕೆ ಇನ್ನಷ್ಟು ಜನ ಜಮಾವಣೆಗೊಂಡಿದ್ದಲ್ಲದೇ, ಸ್ಥಳದಲ್ಲಿ ಎರಡು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ, ಸೌಜನ್ಯ ಮನೆಗೆ ದಾರಿ ಎಂದು ಹಾಕಿದ್ದ ಬೋರ್ಡಿಗೂ ಹಾನಿ ಎಸಗಿದ್ದಾರೆ. ಆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮೈಕ್ ಮೂಲಕ ಎಚ್ಚರಿಕೆ ನೀಡಿ ಗುಂಪನ್ನು ಚದುರಿಸಿದ್ದಾರೆ.
ಪೊಲೀಸ್ ಸ್ಟೇಷನ್ ಮುಂದೆ ಧರ್ಮಸ್ಥಳ ಬೆಂಬಲಿಗರಿಂದ ಪ್ರತಿಭಟನೆ
ಈ ನಡುವೆ ಧರ್ಮಸ್ಥಳ ಪೊಲೀಸ್ ಸ್ಟೇಷನ್ ಮುಂದೆ ಸೇರಿರುವ ಧರ್ಮಸ್ಥಳ ದೇವಸ್ಥಾನದ ಬೆಂಬಲಿಗರು, ಕ್ಷೇತ್ರದ ಹೆಸರನ್ನು ಹಾಳುಗೆಡವಲು ಯತ್ನಿಸಲಾಗುತ್ತಿದೆ. ಕಮ್ಯುನಿಷ್ಟ್ ಪ್ರೇರಿತ ಷಡ್ಯಂತ್ರ ಇದು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್‌ಪಿ ಹಾಗೂ ಡಿಎಸ್‌ಪಿ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದು, ಧರಣಿ ಕುಳಿತಿದ್ದಾರೆ.


