- ತೀರ್ಪು ಪ್ರಕಟಿಸಿದ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್
- ಆರೋಪಿ ಸಂತೋಷ್ ರಾವ್ ವಿರುದ್ಧ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಪ್ರಕರಣ (ಅತ್ಯಾಚಾರ,ಕೊಲೆ) ಕ್ಕೆ ಸಂಬಂಧಿಸಿ, 11 ವರ್ಷಗಳ ಬಳಿಕ ಆರೋಪಿಯನ್ನು ದೋಷ ಮುಕ್ತಗೊಳಿಸಲಾಗಿದೆ.
ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್‌ನನ್ನು ದೋಷಮುಕ್ತಗೊಳಿಸಿ, ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ಸಂತೋಷ್ ರಾವ್ ಪ್ರಕರಣದಿಂದ ದೋಷಮುಕ್ತ ಎಂದು ಸಿಬಿಐ ನ್ಯಾಯಾಧೀಶ ಸಂತೋಷ್ ಸಿ.ಬಿ ಆದೇಶಿಸಿದ್ದಾರೆ. ಆರೋಪಿ ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದರು.
ವಿಚಾರಣೆ ವೇಳೆ ವಕೀಲರಾದ ಮೋಹಿತ್ ಕುಮಾರ್, ‘ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ಅತ್ಯಾಚಾರ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.
ಸೌಜನ್ಯ ಸತ್ತಾಗ ವಿಪರೀತ ಮಳೆ ಬರುತ್ತಿತ್ತು. ಆಕೆಯ ಬ್ಯಾಗಿನಲ್ಲಿದ್ದ ಪುಸ್ತಕಗಳು ಒದ್ದೆಯಾಗಿರಲಿಲ್ಲ. ಅದೇ ದಿನ 500 ಜನ ಹುಡುಕಾಟ ನಡೆಸಿದ್ದರೂ ಕೂಡ ಯಾರಿಗೂ ಪತ್ತೆಯಾಗಿರಲಿಲ್ಲ. 50 ಮೀಟರ್ ಅಂತರದಲ್ಲಿ ಟೆಂಟ್‌ನಲ್ಲಿ ವಾಸ ಎಂದು ಅನುಮಾನ ವ್ಯಕ್ತಪಡಿಸಿ ಸಂತೋಷ್ ರಾವ್‌ನನ್ನು ಬಂಧಿಸಲಾಗಿತ್ತು. ಅಲ್ಲೇ ಹತ್ತಿರದಲ್ಲಿದ್ದ ಪ್ರಕೃತಿ ಚಿಕಿತ್ಸಾಲಯದ ಸಿಸಿಟಿವಿ ವಿಡಿಯೋ ಸಂಗ್ರಹಿಸಿಲ್ಲ. ಪೋಸ್ಟ್ ಮಾರ್ಟಂ ರಾತ್ರೋರಾತ್ರಿ ಮಂದಬೆಳಕಿನಲ್ಲಿ ಮಾಡಿದ್ದಾರೆ’ ಎಂಬ ಎಲ್ಲ ಅಂಶಗಳನ್ನು ಇಟ್ಟುಕೊಂಡು ವಾದ ಮಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಚಿಕ್ಕಬಳ್ಳಾಪುರ | 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ; ಶಿಕ್ಷಕಿ ವಿರುದ್ಧ ಎಫ್‌ಐಆರ್
ಧರ್ಮಸ್ಥಳದ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ 2012ರ ಅ.9ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಎಂಬಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಹಾಗಾದರೆ, ಆಕೆಯನ್ನು ಕೊಂದವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.