ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ನಡೆದಿದೆ. ಈ ಮಧ್ಯೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಎಸ್ ಐ ಟಿ ತನಿಖೆ ಆರಂಭಿಸಿದೆಯಾ ಎಂಬ ಪ್ರಶ್ನೆ ಕೂಡ ಮೂಡತೊಡಗಿದೆ.
ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (SIT) ಕೈಗೆತ್ತಿಕೊಂಡಿದ್ದು, ಆರೋಪಕ್ಕೊಳಗಾಗಿರುವವರನ್ನು ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಗೆ ಒಳಗಾಗಿರುವವರಲ್ಲಿ ಒಬ್ಬರಾದ ಉದಯ್ ಕುಮಾರ್ ಜೈನ್, ‘ತಾವು ಯಾವುದೇ ತನಿಖೆಗೂ ಸಿದ್ಧವಿದ್ದು, ಮತ್ತೊಮ್ಮೆ ತಮ್ಮ ಬ್ರೈನ್ ಮ್ಯಾಪಿಂಗ್ ಮಾಡಲು ಕೂಡ ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.
ಸೌಜನ್ಯ ಕುಟುಂಬಸ್ಥರು ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಅವರ ಮೇಲೆ ಆರೋಪ ಮಾಡಿದ್ದರು. ಅವರ ಪೈಕಿ ಉದಯ್ ಜೈನ್ ಎಸ್‌ಐಟಿ ಮುಂದೆ ಬುಧವಾರ ಹಾಜರಾಗಿದ್ದಾರೆ.
ಎಸ್‌ಐಟಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಉದಯ್ ಕುಮಾರ್ ಜೈನ್, “ನಿನ್ನೆ ರಾತ್ರಿ ಎಸ್‌ಐಟಿ ಅಧಿಕಾರಿಯೋರ್ವರು ನನಗೆ ಕರೆ ಮಾಡಿ ಇವತ್ತು ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಹಾಗಾಗಿ ಬಂದಿದ್ದೇನೆ. ನಾನು ಯಾವುದೇ ವಿಚಾರಣೆಗೂ ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಗೂ ತಾನು ಸಂಪೂರ್ಣ ಸಹಕರಿಸಿರುವುದಾಗಿ ಹೇಳಿರುವ ಉದಯ್ ಜೈನ್,’ನಮ್ಮ ಬ್ರೈನ್ ಮ್ಯಾಪಿಂಗ್ ಕೂಡಾ ಆಗಿದೆ. ಮತ್ತೊಮ್ಮೆ ಬ್ರೈನ್ ಮ್ಯಾಪಿಂಗ್ ಮಾಡುವುದಕ್ಕೂ ನಾವು ಸಿದ್ಧರಿದ್ದೇವೆ. ನಮ್ಮ ಬಳಿ ಮಾನನಷ್ಟ ಮೊಕದ್ದಮೆ ಹೂಡಲು ಹಣವಿಲ್ಲ. ಅಲ್ಲದೆ, ಎಸ್‌ಐಟಿ ತನಿಖೆಗೆ ನಾನು ಸಾಯುವವರೆಗೂ ಸಹಕಾರ ನೀಡಲು ಸಿದ್ಧನಿದ್ದೇನೆ. ಈ ಪ್ರಕರಣಕ್ಕೆ ಈಡಿ ಪ್ರವೇಶಿಸಿದ್ದು, ಸತ್ಯ ಹೊರಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್‌ನಿಂದ ಚಿನ್ನಾಭರಣ ಕಳವು: ಸಿಬ್ಬಂದಿ ಸಹಿತ ಐವರ ಬಂಧನ
“ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿಗೆ ಕರೆದಿರಲೂಬಹುದು. ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೂ ಕರೆದಿರಬಹುದು. ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು. ಗುಂಡಿ ಎಲ್ಲಾ ತೋಡಿಯಾಗಿದೆ. ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ” ಎಂದು ಉದಯ್ ಕುಮಾರ್ ಜೈನ್ ಇದೇ ವೇಳೆ ಹೇಳಿಕೆ ನೀಡಿದ್ದಾರೆ.
