ಧರ್ಮಸ್ಥಳದಲ್ಲಿ ವರದಿ ಮಾಡುವಾಗ ತಮ್ಮ ಮೇಲೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಹಲ್ಲೆ ಮಾಡಿದ್ದಾರೆ ಎಂದು ಸುವರ್ಣನ್ಯೂಸ್‌ನ ವರದಿಗಾರ ಮತ್ತು ಕ್ಯಾಮೆರಾಮನ್ ಮಾಡಿದ್ದ ಆರೋಪ ಸುಳ್ಳು ಎಂಬುದು ಒಂದೇ ದಿನದಲ್ಲಿ ಬಟಾಬಯಲಾಗಿದೆ. ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಅವರಿಗೆ ಯಾವುದೇ ಪೆಟ್ಟು ಬಿದ್ದಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ತಿಮರೋಡಿ ಮತ್ತು ಗಿರೀಶ್ ವಿರುದ್ಧ ಸುವರ್ಣನ್ಯೂಸ್ ಸುಳ್ಳು ಆರೋಪ ಮಾಡಿದೆ ಎಂಬುದು ಸಾಬೀತಾಗಿದೆ.
ಬುಧವಾರ, ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಧರ್ಮಸ್ಥಳದಲ್ಲಿ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯೂಟ್ಯೂಬರ್‌ಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲು ತಿಮರೋಡಿ ಮತ್ತು ಗಿರೀಶ್ ತೆರಳಿದ್ದರು. ಈ ವೇಳೆ, ತಮಗೆ ಬೈಟ್ ನೀಡುವಂತೆ ಸುವರ್ಣನ್ಯೂಸ್‌ನ ವರದಿಗಾರ ಮತ್ತು ಕ್ಯಾಮೆರಾಮನ್‌ಗಳಾದ ಹರೀಶ್ ಮತ್ತು ನವೀನ್ ಪುಜಾರಿ ಒತ್ತಾಯಿಸಿದ್ದರು. ಆದರೆ, ಬೈಟ್ ನೀಡಲು ತಿಮರೋಡಿ ಮತ್ತು ಗಿರೀಶ್ ನಿರಾಕರಿಸಿದ್ದರು. ಆ ಕಾರಣಕ್ಕೆ ಹರೀಶ್ ಮತ್ತು ನವೀನ್ –ಇಬ್ಬರೂ ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಆದಾಗ್ಯೂ, ತಮ್ಮ ಮೇಲೆ ತಿಮರೋಡಿ ಮತ್ತು ಗಿರೀಶ್ ಹಲ್ಲೆ ನಡೆಸಿದ್ದಾರೆ ಎಂದು ಸುವರ್ಣನ್ಯೂಸ್‌ನ ಹರೀಶ್ ಮತ್ತು ನವೀನ್ ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು, ಸುವರ್ಣನ್ಯೂಸ್ ಕೂಡ ‘ತಮ್ಮ ಸಿಬ್ಬಂದಿಗಳ ಮೇಲೆ ತಿಮರೋಡಿಯಿಂದ ಹಲ್ಲೆ’ ಎಂದು ಸುಳ್ಳು ಸುದ್ದಿ ಪ್ರಕಟಿಸಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸುವರ್ಣನ್ಯೂಸ್‌ನ ಹರೀಶ್ ಮತ್ತು ನವೀನ್‌ಗೆ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಇಬ್ಬರನ್ನೂ ಪರೀಕ್ಷಿಸಿದ ‘ಬೆನಕ ಹೆಲ್ತ್ ಸೆಂಟರ್’ನ ವೈದ್ಯ ಮುರುಗನ್ ಅವರು ಈ ಇಬ್ಬರ ಮೇಲೂ ಯಾವುದೇ ಹಲ್ಲೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯ ವರದಿ ನೀಡಿರುವ ವೈದ್ಯ ಮುರುಗನ್, “ಪೊಲೀಸ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಹರೀಶ್ ಮತ್ತು ನವೀನ್ ಪುಜಾರಿಯನ್ನು ಪರೀಕ್ಷಿಸಲಾಗಿದೆ. ಅವರ ದೇಹದ ಮೇಲೆ ಯಾವುದೇ ಗಾಯದ ಅಥವಾ ಪೆಟ್ಟು ಬಿದ್ದಿರುವ ಗುರುತುಗಳು ಪತ್ತೆಯಾಗಿಲ್ಲ” ಎಂದು ದೃಢಪಡಿಸಿದ್ದಾರೆ.

ಅಲ್ಲದೆ, ಹಲ್ಲೆಗೊಳಗಾಗಿದ್ದೇನೆಂದು ಹೇಳಿಕೊಂಡಿದ್ದ ಹರೀಶ್‌ನ ವಿಡಿಯೋ ತುಣುಕೊಂದು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ; ವ್ಯಕ್ತಿಯೊಬ್ಬರು ನಿನ್ನ ಮೇಲೆ ಹಲ್ಲೆ ನಡೆದಿದೆಯೇ ಎಂದು ಪ್ರಶ್ನಿಸಿದ್ದಾರೆ. ಉತ್ತರಿಸಿದ ಹರೀಶ್, “ಹಲ್ಲೆಗೆ ಯತ್ನಿಸಿದರು. ಅಷ್ಟರಲ್ಲಿ, ಎಲ್ಲರೂ ನಮ್ಮನ್ನು ರಕ್ಷಿಸಿದರು. ನಾವು ಸೇಫ್ ಆಗಿದ್ದೇವೆ” ಎಂದು ಹೇಳಿದ್ದಾರೆ. ಮತ್ತೆ ಹಲ್ಲೆಯ ಆರೋಪ ಯಾಕೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಹರೀಶ್ ಹಾರಿಕೆಯ ಉತ್ತರ ನೀಡಿದ್ದಾರೆ.
ಇದೀಗ, ಸುಳ್ಳು ಆರೋಪ ಮತ್ತು ಸುಳ್ಳು ವರದಿ ಪ್ರಸಾರ ಮಾಡಿದ ಸುವರ್ಣನ್ಯೂಸ್‌ನ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್, ಹರೀಶ್ ಮತ್ತು ನವೀನ್ ಪುಜಾರಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.