ಧಮಸ್ಥಳದಲ್ಲಿ ಎಸ್‌ಐಟಿ ತನಿಖೆಯ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆ ಪ್ರತಿಭಟನೆಗೆ ಕರೆಕೊಟ್ಟಿವೆ. ಗುರುವಾರ ಸಂಜೆ 5 ಗಂಟೆಗೆ ತಿಮರೋಡಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕರಣೆ ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ, “ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಸಮಯದಲ್ಲಿ, ನಮ್ಮ ಕಾರ್ಯಕರ್ತರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ಧರ್ಮಸ್ಥಳದ ಡಿ. ಗಂಗಾ ಅವರ ಪ್ರಚೋದನೆಯಿಂದ ಕೆಲವು ಪುಂಡರು ದಾಂಧಲೆ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬುಧವಾರ, ಎಸ್‌ಐಟಿ ತನಿಖೆ ಮತ್ತು ನ್ಯಾಯ ಚಳುವಳಿಯ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳಾದ ಕುಡ್ಲಾ ರಾಂಪೇಜ್‌ನ ಅಜಯ್ ಅಂಚನ್, ಸಂಚಾರಿ ಸ್ಟುಡಿಯೋದ ಸಂತೋಷ್ ಮತ್ತು ಯುನೈಟೆಡ್ ಮೀಡಿಯಾದ ಅಭಿಷೇಕ್ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಈ ಹೇಯ ಕೃತ್ಯವನ್ನು ಖಂಡಿಸಿ, ತಿಮರೋಡಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಗೂಂಡಾಗಳ ಹಲ್ಲೆಯಿಂದ ಗಾಯಗೊಂಡ ಯೂಟ್ಯೂಬರ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯೂಟ್ಯೂಬರ್‌ಗಳ ಮೇಲಿನ ದಾಳಿಯ ನಂತರ, ಧರ್ಮಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾರವಣ ಸೃಷ್ಟಿಯಾಗಿದೆ. ಹಲ್ಲೆಗೈದ ದುಷ್ಕರ್ಮಿಗಳ ವಿರುದ್ಧ ಧರ್ಮಸ್ಥಳ ಮತ್ತು ಉಜಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.