ಕನ್ನಡ ಸಾಹಿತ್ಯ ಪರಿಷತ್ತು 111ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಸಮಾಜದ ಬೇರೆ ಬೇರೆ ರಂಗಗಳಲ್ಲಿರುವ ಸಾಹಿತಿಗಳನ್ನು ಗುರುತಿಸಿ ಅವರನ್ನು ಮುನ್ನಲೆಗೆ ತರುವ ಕೆಲಸ ಮಾಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.
ಸಸಿಗೆ ನೀರೆರೆವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಎಲ್ಲಾ ಅಧ್ಯಕ್ಷರುಗಳು ತಮ್ಮ ಮಿತಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಮೃದ್ಧಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಬಂಡಾಯ ಲೇಖಕ ಡಾ. ಚಂದ್ರಶೇಖರ್ ಪಾಟೀಲರು ಅಧಿಕಾರಶಾಹಿಯನ್ನು ಪ್ರತಿರೋಧಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದ ಮಾದರಿ ನಮ್ಮ ಮುಂದಿದೆ. ಇಂದಿನ ಯುವಜನರು ಇದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿ ಪ್ರೊ .ಶ್ಯಾಮಸುಂದರ ಬಿದರಗುಂದಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಒಗ್ಗಟ್ಟು ಮತ್ತು ಅಸ್ಮಿತೆಯ ಸಂಕೇತವಾಗಿದೆ. ನಾವೆಲ್ಲ ಒಂದಾಗಿ ಬಾಳಲು ನಮಗೆ ಸಾಹಿತ್ಯದ ಜ್ಞಾನ ಅಗತ್ಯವಾಗಿದೆ. ಇಂತಹ ಜ್ಞಾನ ನೀಡುವ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಅಂತೆಯೇ ಧಾರವಾಡದಲ್ಲಿರುವ ವಿದ್ಯಾವರ್ಧಕ ಸಂಘವು ಕನ್ನಡ ನಾಡು ನುಡಿಯ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವುದನ್ನು ಸ್ಮರಿಸಿದರು.
ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ತಲೆಮಾರಿನ ಯುವಕರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸತ್ವವನ್ನು ಪಡೆದುಕೊಂಡು ಅದರ ಬೆಳವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದರು. ಸುನಂದಾ ನಿಂಬನಗೌಡರ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ. ಮೇಟಿ ರುದ್ರೇಶ್ ನಿರೂಪಿಸಿದರು. ಕು. ಬಾನುಬಿ ವಂದಿಸಿದರು. ಈ ವೇಳೆ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಶ್ಯಾಮಸುಂದರ ಬಿದರಕುಂದಿ ಹಾಗೂ ಸುನಂದಾ ನಿಂಬನಗೌಡರ ಅವರನ್ನು ಸನ್ಮಾನಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಭಾರತೀಯರಿಗೆ ವರವಾಗಿ ದೊರೆತ ಸಂವಿಧಾನ ಪ್ರತಿಯೊಬ್ಬರ ಜೀವನಾಡಿ: ರಂಜಾನ ದರ್ಗಾ
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಐ. ಎ. ಮುಲ್ಲಾ ಹಾಗೂ ಡಾ. ಎನ್. ಬಿ. ನಾಲತವಾಡ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಪ್ರೊ ಡಾ. ಅಬ್ದುಲ್‌ಕರಮ ಆದೋನಿ ಕುರಾನ್ ಪಠಣ ಮಾಡಿದರು. ಶ್ವೇತಾ ವರಚಗಿ ಶ್ಲೋಕ ಪಠಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.