ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅತಿದೊಡ್ಡ ಸಂಶಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಇದೀಗ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಗಿರೀಶಗೌಡ ಪಾಟೀಲ್, ಉಪಾಧ್ಯಕ್ಷೆಯಾಗಿ ಲೀಲಾವತಿ ಪ. ಸೂಲದ ಆಯ್ಕೆಯಾಗಿದ್ದಾರೆ.
33 ಸದಸ್ಯ ಬಲ ಖ್ಯಾತಿಗೆ ಪಾತ್ರವಾದ ಸಂಶಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಗಿರೀಶಗೌಡ ಪಾಟೀಲ ಹಾಗೂ ಮಲ್ಲೇಶಪ್ಪ ಬೆಳವಡಿ ನಾಮಪತ್ರ ಸಲ್ಲಿಸಿದ್ದರು. ಮಲ್ಲೇಶಪ್ಪ 16 ಮತ ಪಡೆದರೆ; ಗಿರೀಶಗೌಡ ಪಾಟೀಲ 17 ಮತ ಪಡೆದು 1 ಮತದ ಅಂತರದಿಂದ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಪ. ಸೂಲದ ಹಾಗೂ ನಿಂಗವ್ವ ಕುಮ್ಮಣ್ಣವರ ಉಮೇದುವಾರಿಕೆ ಸಲ್ಲಿಸಿದ್ದರು. ನಿಂಗವ್ವ 14 ಮತಗಳಿಂದ ಸೋಲುಂಡರೆ; ಲೀಲಾವತಿ 19 ಮತ ಪಡೆದು ಜಯಭೇರಿ ಆಗಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ನೂತನ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಾಗೂ ಉಪಾಧ್ಯಕ್ಷೆ ಲೀಲಾವತಿ ಸೂಲದ ಮಾತನಾಡಿ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಶಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಇದಕ್ಕೆ ಗ್ರಾಮದ ಗುರು-ಹಿರಿಯರು ಸಹಕಾರ ನೀಡಬೇಕು. ಗ್ರಾಮದಲ್ಲಿ ಮೂಲ ಸೌಲಭ್ಯಗಳನ್ನು ಒಳಗೊಂಡಂತೆ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ ಎಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಸರ್.ಸಿದ್ದಪ್ಪ ಕಂಬಳಿ, ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸಲು ಹೋರಾಡಿದವರು: ರಾಮಪ್ಪ ಬಡಿಗೇರ
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು ಪುಟ್ಟಣ್ಣವರ, ಗೌರವ್ವ ಹರಕುಣಿ, ಸರ್ವ ಸದಸ್ಯರು ಹಾಗೂ ಪಿಡಿಒ ಪಾಂಡುರಂಗ ಹತ್ತಿ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಗುರು-ಹಿರಿಯರು ಇದ್ದರು.