ಕೆಲ ದಿನಗಳಲ್ಲೇ ಹುಬ್ಬಳ್ಳಿಯಲ್ಲಿ ಇಬ್ಬರು ಯುವತಿಯರ ಬರ್ಬರ ಹತ್ಯೆ ಪ್ರಕರಣಗಳು ನಡೆದಿದ್ದು, ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅವರನ್ನು ಅಮಾನತು ಮಾಡಲಾಗಿದೆ.
ಈ ಹಿಂದೆ ನೇಹಾ ಹಿರೇಮಠ್ ಎಂಬ ಯುವತಿಯ ಹತ್ಯೆ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿ ಕೊಲೆಯಾಗಿದೆ. ಪ್ರೀತಿಸುವಂತೆ ಪೀಡಿಸುತ್ತಿದ್ದ ಗಿರೀಶ್ ಎಂಬಾತ ಆಕೆಯ ಮನೆಗೆ ನುಗ್ಗಿ ಆಕೆಯನ್ನು ಹತ್ಯೆ ಮಾಡಿದ್ದಾನೆ.
ಭೀಕರ ಕೊಲೆಗಳಿಂದಾಗಿ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿನ ಲೋಪದ ಮೇಲೆ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ, ಹೆಡ್ಕಾನ್ಸ್ಟೇಬಲ್ ರೇಖಾ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ, ಡಿಸಿಪಿ ರಾಜೀವ್ ಅವರನ್ನೂ ಅಮಾನತು ಮಾಡಲಾಗಿದೆ.
ಅಂಜಲಿ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ ಗಿರೀಶ್ ತಾಯಿ, “ಇಂತಹ ಪಾಪಿ ಮಕ್ಕಳು ಯಾರಿಗೂ ಬೇಡ. ನ್ಯಾಯಾಲಯ ಅವನಿಗೆ ಶಿಕ್ಷೆ ಕೊಡಬೇಕು” ಎಂದಿದ್ದಾರೆ.