ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕೇಂದ್ರ ಸರ್ಕಾರದ ಪ್ರೋತ್ಸಾಹಧನ, ಏಪ್ರಿಲ್ 1ರಿಂದ ಅನ್ವಯವಾಗುವಂತೆ ರೂ.10,000ಗಳ ಕನಿಷ್ಠ ಗೌರವಧನ ಮತ್ತು ಈ ವರ್ಷದ ಬಜೆಟ್ ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದ ರೀತಿ ರೂ.1000 ಹೆಚ್ಚಳದ ಆದೇಶವನ್ನು ಕೂಡಲೇ ನೀಡುವಂತೆ ಒತ್ತಾಯಿಸಿ ನಿನ್ನೆ (ಆ.12)ಯಿಂದ ಮೂರು ದಿನಗಳ ಕಾಲ ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, “ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರಗಳ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಮೊದಲ ಕರೆಯಾಗಿದ್ದಾರೆ. ಜನತೆಯ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ಕಾರ್ಯಕರ್ತೆ ತನ್ನ ಸೇವೆಯಿಂದ ಕಟ್ಟಕಡೆಯ ವ್ಯಕ್ತಿಯನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾದರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ಸರ್ಕಾರಗಳು ಇವರ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ. 17 ವರ್ಷದಿಂದ ಸೇವೆ ಮಾಡಿದ ಈ ಆಶಾಗೆ ಯಾವುದೇ ಪರಿಹಾರ ನೀಡದೆ ಬೀದಿಗೆ ತಳ್ಳಿದ್ದು, ಅವರಿಗೆ ಕೂಡಲೇ ಪರಿಹಾರ ಘೋಷಿಸಬೇಕು. ದಿಢೀರನೆ ತೆಗೆದುಹಾಕಿರುವ 2000 ಸುಗಮಕಾರರನ್ನೇ ಮುಂದುವರೆಸಬೇಕು” ಎಂದರು.
ಇದನ್ನೂ ಓದಿ: ಧಾರವಾಡ | ಗಣಿತ ವಿಷಯ ಬೋಧಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
“ಕಾರ್ಯನಿರತ ಸುಮಾರು 41,000 ಆಶಾಗಳಿಗೆ ಅವರ ಕೆಲಸದ ಮೌಲ್ಯ ಮಾಪನ ಮಾಡುವ ಆದೇಶ ಹೊರಡಿಸಿ ವಿವಿಧ ರೀತಿಯಲ್ಲಿ ಮೌಲ್ಯಮಾಪನ ಮಾಡಿಸುತ್ತಿದ್ದಾರೆ. ಮೌಲ್ಯಮಾಪನದ ಮಾದರಿಯನ್ನು ಸಂಘದಿಂದ ಸಂಪೂರ್ಣವಾಗಿ ವಿರೋಧಿಸಲಾಗುತ್ತದೆ. ಸಿಎಂ ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ಗ್ಯಾರಂಟಿಯನ್ನು ಈ ಏಪ್ರಿಲ್ ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ರಾಜ್ಯ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಗೌರವಧನ ಹೆಚ್ಚಳ ಮಾಡಬೇಕು. ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು. 2025 ಜೂನ್-ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.