ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ನಡೆಯನ್ನು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘವು ವಿರೋಧಿಸಿದೆ. ಸಂಘದ ಸದಸ್ಯರು ಸೋಮವಾರ ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ
ಆಟೋ ಚಾಲಕರ ಪರವಾನಗಿ ಪ್ರಮಾಣ ಪತ್ರ ಆಧರಿಸಿ ಅವರಿಗೆ ಮಾಸಿಕ ₹10 ಸಾವಿರ ನೀಡಬೇಕು. ಆಟೋ ರಿಕ್ಷಾ ಚಾಲಕರ ನಿಗಮ ಮಂಡಳಿ ರಚನೆ, ಚಾಲಕರಿಗೆ ಆಟೋ ಕಾಲೊನಿ, ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಉಚಿತ ಶಿಕ್ಷಣ, 60 ವರ್ಷ ದಾಟಿದವರಿಗೆ ಪಿಂಚಣಿ ಸೌಲಭ್ಯ, ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ₹5 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
“ಶಕ್ತಿ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಿರುವುದರಿಂದ ಆಟೋಗಳಿಗೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಆಟೋ ಚಾಲಕರ ಕುಟುಂಬ ಬೀದಿಗೆ ಬರಲಿದ್ದು, ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಒತ್ತಾಯ
“ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಬಾರದು. ನಗರದಿಂದ 25 ಕಿ.ಮೀ. ವ್ಯಾಪ್ತಿಯ ಹೊರಗಡೆ ಈ ಸೌಲಭ್ಯ ಒದಗಿಸಿದರೆ, ಆಟೋ ಚಾಲಕರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.