ಬುದ್ಧನ ಕಾಲಕ್ಕೆ ವರ್ಣಾಶ್ರಮ ವ್ಯವಸ್ಥೆಯನ್ನು ಅಲ್ಲಗಳೆಯುವುದೇ ದೊಡ್ಡ ಕ್ರಾಂತಿಯಾಗಿತ್ತು. ಅಂತಹ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಹೋರಾಡಿದ ಏಕೈಕ ಮಹಾಪುರುಷ ಬಸವಣ್ಣ ಎಂದು ಶರಣ ಸಾಹಿತಿ, ಚಿಂತಕ ರಂಜಾನ್ ದರ್ಗಾ ಹೇಳಿದರು.
ಧಾರವಾಡದಲ್ಲಿ ನಡೆದ ‘ಕಾಯಕ ಮತ್ತು ದಾಸೋಹ: ಸಾಮಾಜಿಕ ನ್ಯಾಯದ ಶ್ರೇಷ್ಠ ಪರಿಕಲ್ಪನೆ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಜೈನ, ಬೌದ್ಧ, ಲಿಂಗಾಯತ ಮತ್ತು ಸಿಖ್ ಧರ್ಮಗಳು ಈ ದೇಶದಲ್ಲಿ ಜನ್ಮತಾಳಿದವು. ಈ ನಾಲ್ಕೂ ಧರ್ಮಗಳು ಅವೈದಿಕವಾಗಿವೆ. ಚಾತುರ್ವರ್ಣ, ಅಸ್ಪೃಶ್ಯತೆ, ಜಾತಿಯತೆಯನ್ನು ವಿರೋಧ ಮಾಡುವ ಹೋರಾಟಗಳಿಗೆ ಈ ದೇಶದಲ್ಲಿ 3 ಸಾವಿರ ವರ್ಷದ ಇತಿಹಾಸವಿದೆ. ಆದರೆ; ಯಾರೂ ಯಾಕೆ ಬದಲಾಗಿಲ್ಲ ಎನ್ನುವುದೇ ದೊಡ್ಡ ಪ್ರಶ್ನಯಾಗಿದೆ” ಎಂದರು.
“ಅವೈದಿಕತೆಯಲ್ಲಿ ಜಾತಿಯತೆ, ಅಸ್ಪೃಶ್ಯತೆ, ಹೆಣ್ಣು ಗಂಡಿನ ಭೇದವಿಲ್ಲ. ಇಂತಹ ಸಂವಿಧಾನ ನಮಗೆ ಸಿಗಬೇಕಾದರೆ 3 ಸಾವಿರ ವರ್ಷಗಳ ಮಾನವ ಕುಲದ ಶ್ರಮವಿದೆ ಎನ್ನುವುದನ್ನು ನಾವು ಮರೆಯಬಾರದು. ಬಸವಣ್ಣನವರ ಧರ್ಮ ಸರಳ ಮತ್ತು ವೈಜ್ಞಾನಿಕವಾಗಿದೆ. ಮನಸ್ಸಿನ ಶುದ್ಧೀಕರಣ, ಮನಸ್ಸಿನ ವಿಕಸನ ಮತ್ತು ಮನಸ್ಸಿನ ಪ್ರಾಯೋಗಿಕ ಚಿಂತನೆಯುಳ್ಳ ಮೂರು ವಿಧದ ಅಂಶಗಳುಳ್ಳ ಧರ್ಮವಾಗಿದೆ. ಇಡೀ ಬಸವಧರ್ಮ ರೈತಾಪಿ ಸಂಸ್ಕೃತಿಯ ಮೇಲೆ ನಿಂತಿದೆ. ಅಷ್ಟಾವರಣಗಳು ನಮ್ಮ ಮನಸ್ಸು ಐಹಿಕ ಆಸೆಗಳಿಗೆ ಒಳಗಾಗದಂತೆ ತಡೆಯುತ್ತವೆ. ಇದಕ್ಕೆ ರೈತರು ಬೀಜೋಪಚಾರ ಅನ್ನುತ್ತಾರೆ. ಷಟ್‌ಸ್ಥಲಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ. ಕಾಯಕವು ಬಸವಧರ್ಮದ ತಳಪಾಯವಾಗಿದೆ. ಬಸವಣ್ಣನವರ ಧರ್ಮವು ನಿಸರ್ಗದ ಧರ್ಮವಾಗಿದೆ. ಕಾಯಕವು ಸೃಷ್ಟಿಗೆ ಪೂರಕವಾಗಿರಬೇಕು” ಎಂದರು.
ಲೇಖಕಿ ವಿನಯಾ ವಕ್ಕುಂದ ಮಾತನಾಡಿ, “ವಚನ ಚಳವಳಿಯು ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಅಳವಡಿಸಲು ಪ್ರಯತ್ನಿಸಿತು. ಒಂದು ಕಾಲದ ಸಮಸ್ಯೆಗಳಿಗೆ ಉತ್ತರ ಕೊಡುವ ಸಲುವಾಗಿ ಚಳವಳಿಗಳು ಜನ್ಮ ತಾಳುತ್ತವೆ. ಆ ನಿಟ್ಟಿನಲ್ಲಿ ಬಸವಣ್ಣ ವಚನ ಚಳವಳಿಯ ರೂವಾರಿಯಾಗಿ ನಿಲ್ಲುತ್ತಾರೆ. ವಚನ ಸಾಹಿತ್ಯವನ್ನು ಸಾಂಪ್ರದಾಯಿಕ ಓದು, ನಿರಾಕರಣೆ ಓದು ಮತ್ತು ವೈಚಾರಿಕ ಓದು ಎನ್ನುವ ಮೂರು ವಿಧದಲ್ಲಿ ಓದಲಾಗುತ್ತದೆ. ವಚನ ಮತ್ತು ವಚನಕಾರರನ್ನು ಧರ್ಮದ ಚೌಕಟ್ಟಿನಿಂದ ಇಚೇಗೆ ತಂದು ಇಂದಿನ ಅಗತ್ಯಗಳಿಗೆ ಅನುಸಂಧಾನಗೊಳಿಸುವ ಪರಿವರ್ತಿತ ನೆಲೆಯಾಗಿ ಗಮನಿಸಬೇಕಿದೆ” ಎಂದರು.
ಇದನ್ನೂ ಓದಿ: ಧಾರವಾಡ | ಭಾರಿ ಮಳೆಗೆ ಪ್ರವಾಹ ಸೃಷ್ಟಿ; ನಡುಗಡ್ಡೆಯ ಮನೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ
ಡಾ. ಅವಿನಾಶ ಕವಿ ಮಾತನಾಡಿ, “ಬಸವ ಕ್ರಾಂತಿಯು ಕನ್ನಡ ನಾಡಿನಲ್ಲಿ ಅಪೂರ್ವ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ನೈತಿಕ, ವೈಚಾರಿಕ, ಸಾಂಸ್ಕೃತಿಕ ಚಿಂತನೆಗಳ ಮೂಲಕ ಹೊಸ ಧರ್ಮ ಮತ್ತು ಹೊಸ ಸಾಹಿತ್ಯ ಪ್ರಕಾರದ ಮಹಾಮಾರ್ಗಕ್ಕೆ ನಾಂದಿ ಹಾಡಿತು. ಈ ಕ್ರಾಂತಿಯು ದುಡಿಯುವ ವರ್ಗದ ಕ್ರಾಂತಿಯಾಗಿ ಹೊರಹೊಮ್ಮಿದ್ದು ವಿಶೇಷವೆನಿಸುತ್ತದೆ. ಬಸವಾದಿ ಶರಣರು ಭಾರತೀಯ ದರ್ಶನಗಳಲ್ಲಿ ವಿನೂತನವಾದ ಸೈದ್ಧಾಂತಿಕ ದರ್ಶನ ನೀಡಿದವರು. ವ್ಯಕ್ತಿಯ ಶುದ್ಧೀಕರಣ, ಸಮಾಜದ ಸಬಲಿಕರಣ, ವ್ಯಕ್ತಿತ್ವದ ಉನ್ನತೀಕರಣ ಹಾಗೂ ಮಾನವತೆಯ ಏಕೀಕರಣ ಬಸವಾದಿ ಶರಣರ ಒಟ್ಟಾರೆ ಆಶಯವಾಗಿದೆ” ಎಂದರು.