ಭೋವಿ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ನವಲಗುಂದ ಪಟ್ಟಣದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಭೋವಿ ಸಮಾಜದ ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಪ್ರತಿಭಟನಾಕಾರರು ಮಾತನಾಡಿ, ಭೋವಿಗಳು ವಡ್ಡರಲ್ಲ ವಡ್ಡರು ಭೋವಿಗಳಲ್ಲ ಎಂಬುದು ಸ್ಪಷ್ಟವಾಗಿದ್ದು, ಭೋವಿ ಸಮಾಜದ ಜನರು ರಾಜ ಮಹಾರಾಜರ ಕಾಲದಿಂದಲೂ ರಾಜರನ್ನು ಮತ್ತು ಮಠಾಧಿಪತಿಗಳನ್ನು ಮೇಣೆ, ಪಲ್ಲಕ್ಕಿಗಳಲ್ಲಿ ಹೊತ್ತುಕೊಂಡು ಹೋಗುವ ಕಸುಬು ಮಾಡುತ್ತಿದ್ದರು. ಮೂಲ ಭೋವಿ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ಮೈಸೂರು ಮಹಾರಾಜರೂ ಸಹಿತ ಕೇಂದ್ರ ಸರಕಾರಕ್ಕೆ ಸಿಫಾರಸ್ಸು ಮಾಡಿದ್ದರು.
ವಡ್ಡರ ಜಾತಿಯು ಭೋವಿ ಜಾತಿಗೆ ಸಮಾನಾಂತರ ಪದವಲ್ಲ. ವಡ್ಡರಿಗೆ ನೀಡುವ ಪರಿಶಿಷ್ಟ ಜಾರಿ ಪ್ರಮಾಣ ಪತ್ರವನ್ನು ನಾವು ವಿರೋಧಿಸುವುದಿಲ್ಲ. ಆದರೆ ಭೋವಿ ಸಮಾಜವನ್ನೂ ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಬೇಕು. ಭೋವಿ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ವಲಯದಿಂದ ಈಗಲೂ ಹಿಂದುಳಿದಿದೆ. ಭೋವಿ ಪದವನ್ನು ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ವಡ್ಡರ ಸಮಾಜದವರು ಭೋವಿ ಸಮುದಾಯವನ್ನು ಹೈಜಾಕ್ ಮಾಡಿ, ಭೋವಿ ಜನಾಂಗದವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ಮುಂಬರುವ ಡಿಸೆಂಬರ್ 16ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಕೆಲ ತಹಶೀಲ್ದಾರರು ಹಣ ಕೊಟ್ಟರೆ ಮಾತ್ರ ಭೋವಿ ಜಾತಿಗೆ ಎಸ್.ಸಿ ಪ್ರಮಾಣ ಪತ್ರ ಕೊಡುವುದಾಗಿ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಭೋವಿ ಸಮಾಜಕ್ಕೆ ಬಹಳ ಅನ್ಯಾಯವಾಗುತ್ತಿದ್ದು ಈ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಈ ವರದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ : ವಸತಿ ಶಾಲೆ ಪ್ರಾಂಶುಪಾಲ, ವಾರ್ಡನ್ ಅಮಾನತು
ಪಾದಯಾತ್ರೆಯಲ್ಲಿ ಕರ್ನಾಟಕ ರಾಜ್ಯ ಭೋವಿ ಸಮಾಜದ ಕಾರ್ಯಾಧ್ಯಕ್ಷ ಹುಚಪ್ಪ ಭೋವಿ, ಧಾರವಾಡ ಜಿಲ್ಲಾಧ್ಯಕ್ಷ ವಿಠ್ಠಲ್ ಭೋವಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಮುತ್ತು ಭೋವಿ, ಸಮಾಜದ ಮುಖಂಡ ಬೇಲೂರಪ್ಪ ಭೋವಿ, ನಾಗಪ್ಪ ಭೋವಿ, ಕೃಷ್ಣ ಭೋವಿ ಹಾಗೂ ಸಮಾಜದ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.