ಬುದ್ಧ ಜಯಂತಿ ವೇಳೆ ಅಂಬೇಡ್ಕರ್ ಭಾವಚಿತ್ರ ಹಾಕದಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತ ಪರಮೇಶ ಕಾಳೆ ಮತ್ತು ಧಾರವಾಡದ ಬುದ್ಧಿಷ್ಠ ಪಾಲಿ ಎಜ್ಯುಕೇಶನ್ ಮತ್ತು ರಿಸರ್ಚ್ ಟ್ರಸ್ಟ್‌ನ ಅಧ್ಯಕ್ಷ ಪಬ್ಬಜ್ಜೊರವಿತಿಪಾಲಿಮುನಿಯೊ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಧಾರವಾಡ ಪಟ್ಟಣದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಪರಮೇಶ ಕಾಳೆ ಮಧ್ಯ ಪ್ರವೇಶಿಸಿ ಅಂಬೇಡ್ಕರ್ ಭಾವಚಿತ್ರ ಏಕೆ ಅಳವಡಿಸಿಲ್ಲ ಎಂದು ಪ್ರಶ್ನಿಸಿದಾಗ; ವೇದಿಕೆ ಮೇಲಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್ ಬೆಕ್ಕೇರಿ ಮತ್ತು ಇನ್ನಿತರರು ಇದು ಬುದ್ಧ ಜಯಂತಿ ಮತ್ತು ಸರ್ಕಾರದ ಸುತ್ತೋಲೆ ಪ್ರಕಾರ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಉತ್ತರಿಸಿದರು.
ಪರಮೇಶ ಕಾಳೆ ಸುಮ್ಮನಿರದೆ ಪಬ್ಬಜ್ಜೊರವಿತಿಪಾಲಿಮುನಿಯೊ ಅವರ ಸಹೋದರರ ಬಳಿ ಬಂದು ಮಾತಿನ ಚಕಮಕಿ ಶುರುಮಾಡಿಕೊಂಡಾಗ; ವೇದಿಕೆ ಮೇಲಿದ್ದ ಪಬ್ಬಜ್ಜೊರವಿತಿಪಾಲಿಮುನಿಯೊ ಕೆಳಗಿಳಿದು ಬಂದು ಪರಮೇಶ ಅವರ ಕೊರಳಪಟ್ಟಿ ಹಿಡಿದ ಪರಿಣಾಮ ಕೋಪಗೊಂಡ ಪರಮೇಶ ತನ್ನ ಬೆಂಬಲಿಗರೊಂದಿಗೆ ಸಭಾಭವನದ ಮುಂದೆ ನಿಂತು ಪ್ರತಿಭಟಿಸಿದರು.
ಈ ವೇಳೆ ಪರಮೇಶ ಕಾಳೆ ಮಾತನಾಡುತ್ತಾ, “ಅದ್ಹೇಗೆ ನನ್ನ ಕೊರಳಪಟ್ಟಿ ಹಿಡಿದರು? ಎಂದು ಪ್ರಶ್ನಿಸುತ್ತಾ! ಬುದ್ಧ ಜಯಂತಿ ವೇಳೆ ಅಂಬೇಡ್ಕರ್ ಭಾವಚಿತ್ರ ಏಕೆ ಹಾಕುವುದಿಲ್ಲ? ಬುದ್ಧ ನಮಗೆ ಪರಿಚಯ ಆಗಿದ್ದೆ ಅಂಬೇಡ್ಕರ್ ಅವರಿಂದ. ಅದನ್ನು ಕೇಳಿದ್ದಕ್ಕೆ ನನ್ನ ಕೊರಳಪಟ್ಟಿ ಹಿಡಿಯುತ್ತಾರೆ. ಇದರಿಂದ ನನಗೆ ಅವಮಾನವಾಗಿದೆ ಎಂದು ಅವಾಚ್ಯ ಶಬ್ಧಗಳಿಂದ ಬೈಯತೊಡಗುತ್ತಾರೆ” ಎಂದರು.
ನಾಲ್ಕೈದು ಮಂದಿ ಪೊಲೀಸರ ಕಣ್ಣಮುಂದೆಯೇ ಈ ಎಲ್ಲ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾರ್ಮಿಕ ಸಂಹಿತೆ, ನೀತಿಗಳ ವಿರುದ್ಧ ಬಲಿಷ್ಠ ಹೋರಾಟದ ಅಗತ್ಯವಿದೆ: ಸುನಂದಾ ಎಚ್ ಎಸ್
“ಹಳೆ ವೈಷಮ್ಯ ಕೂಡಾ ಈ ರೀತಿ ಜಗಳವಾಗಲು ಕಾರಣವೆಂದು ಅಲ್ಲಿದ್ದವರು ಮಾತನಾಡುತ್ತಿದ್ದರು. ನಂತರ ಅಲ್ಲಿದ್ದ ಬುದ್ಧ-ಅಂಬೇಡ್ಕರ್ ಅನುಯಾಯಿಗಳೆಲ್ಲ ಸೇರಿ ಸಮಾಧಾನಪಡಿಸಿ, ರಾಜೀ ಸಂದಾನ ಮಾಡಿಸಿದರು. ನಾವೆಲ್ಲರೂ ಒಂದೇ ಆಗಿದ್ದು, ಅಂಬೇಡ್ಕರ್ ಮತ್ತು ಬುದ್ಧನ ವಿಚಾರದಲ್ಲಿ ಜಗಳವಾಡಬಾರದು. ಸರ್ವರೂ ಒಗ್ಗಟ್ಟಿನಿಂದ ನಡೆದಾಗ ಮಾತ್ರ ದೇಶ ಗಟ್ಟಿಯಾಗಿ ಕಟ್ಟಲು ಸಾಧ್ಯ” ಎಂದು ಹೊಸಮನಿ ಹೇಳಿದರು.