ಶರಣರಿಗೆ ಜಾತಿ, ಶ್ರೀಮಂತಿಕೆ, ಬಡತನ ಮುಖ್ಯ ಆಗುವುದಿಲ್ಲ, ಮನುಷ್ಯ ಜಾತಿ ಒಂದೇ ಎಂದು ಬದುಕುತ್ತಾರೆ. ಶರಣರು ಸಮಾಜದ ಸಮಾನತೆ ಹಾಗೂ ಸಹೋದರತ್ವದ ಬಾಳನ್ನು ಜೀವಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಪ್ಪಣ್ಣವರ ಸಂದೇಶಗಳನ್ನು ಬಸವಣ್ಣವರು ಚಾಚು ತಪ್ಪದೇ ಪಾಲಿಸುತ್ತಿದ್ದರು ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಅಭಿಪ್ರಾಯಪಟ್ಟರು.
ಧಾರವಾಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನೂರಾರು ವರ್ಷ ಕಳೆದರೂ ಹಡಪದ ಅಪ್ಪಣ್ಣನವರ ವ್ಯಕ್ತಿತ್ವ, ಆದರ್ಶ ಮತ್ತು ಸಮಾಜಕ್ಕೆ ಕೊಟ್ಟ ವಚನ ಸಾಹಿತ್ಯದಿಂದಾಗಿ ಅವರನ್ನೂ ಇಂದಿಗೂ ಸ್ಮರಿಸುವುದು ಅಗತ್ಯವಾಗಿದೆ” ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ವಿನಯ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಹಡಪದ ಸಮಾಜವು ಸಣ್ಣ ಸಮುದಾಯವಾಗಿದ್ದರೂ, ದೊಡ್ಡ ಸಂಘಟನೆಯಾಗಿ ಸಮಾಜದಲ್ಲಿ ಬೆಳೆದಿರುವುದು ಸಂತಸದ ಸಂಗತಿ. ಶರಣ ಪರಂಪರೆಯ ಅಗ್ರಗಣ್ಯ ಶರಣ ಹಡಪದ ಅಪ್ಪಣ್ಣ ಕಾಯಕ ಯೋಗಿಯಾಗಿ ಅನೇಕ ಅನುಭವದ ವಚನಗಳನ್ನು ಬರೆದಿದ್ದಾರೆ. ಸಮಾಜದಲ್ಲಿ ವಿವಿಧ ಸಮುದಾಯಗಳ ಜನರು ಇರುವದರಿಂದ ಯಾವುದೇ ರೀತಿಯ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು” ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ ಮಾತನಾಡಿ, “12ನೇ ಶತಮಾನವೆಂದರೆ ಎಲ್ಲ ವಚನಕಾರರು ನೆನಪಾಗುತ್ತಾರೆ. ಯಾವುದೇ ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವಧರ್ಮ ಸರ್ವಪಾಲು ಎಂದು ಶರಣರೆಲ್ಲ ಜೀವನ ನಡೆಸಿದವರು. ಅವರ ವಚನಗಳು ನಮ್ಮ ಜೀವನಕ್ಕೆ ಧೇಯ್ಯ ವಾಕ್ಯಗಳಾಗಿವೆ” ಎಂದರು.
“ಶರಣರು ಜನಸಾಮಾನ್ಯರ ಜೀವನ ಮಟ್ಟವನ್ನು ಉನ್ನತಗೊಳಿಸುವ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ನಡೆಸಿದವರು. ಜನರಲ್ಲಿ ಶ್ರದ್ಧೆ, ನೀತಿ ಮತ್ತು ಶುದ್ಧ ಜೀವನವನ್ನು ಪ್ರಚೋದಿಸಿದರು. ಕರ್ಮ ಮತ್ತು ಭಕ್ತಿಯ ಸಂಯೋಜನೆಯ ಮೂಲಕ ಸಮುದಾಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹರಡಿಸಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಜು 14 ರಂದು ಸೌಹಾರ್ದ ಸಂಚಾರ, ಮಸೀದಿಯಿಂದ ಚರ್ಚ್ ವರೆಗೆ ಕಾಲ್ನಡಿಗೆ ಜಾಥಾ
ಕಾರ್ಯಕ್ರಮದಲ್ಲಿ ಧಾರವಾಡ ಕೆ ಇ ಬೋರ್ಡ್ ಪ್ರೌಢ ಶಾಲಾ ಶಿಕ್ಷಕ ಸಂಗಮೇಶ ಹಡಪದ ಶಿವಶರಣ ಅವರು ಹಡಪದ ಅಪ್ಪಣ್ಣನವರ ಜೀವನ ಹಾಗೂ ಸಾಮಾಜಕ್ಕೆ ನೀಡಿದ ಅವರ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಇದ್ದರು.