ಗ್ರಾಮೀಣ ಪ್ರದೇಶದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಉತ್ತಮ ಭವಿಷ್ಯ ರೂಪಿಸುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟ ಖಚಿತಪಡಿಸುವುದಕ್ಕಾಗಿ, ಹಲವು ಅಂಶಗಳ ವಿಶೇಷ ಕಾರ್ಯ ಯೋಜನೆಯೊಂದನ್ನು ಹಮ್ಮಿಕೊಂಡು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ ಪಾಟೀಲ್ ಸೂಚಿಸಿದರು.
ಜಿಲ್ಲೆಯ ಶಾಲಾ ಶಿಕ್ಷಣ ಘಟಕಾಂಶ ಸುಧಾರಣೆಯ ಜಿಲ್ಲಾ ಸಮಿತಿ, ಮತ್ತು ಶಾಲಾ ಕಟ್ಟಡ ಸಿವಿಲ್ ಕಾಮಗಾರಿಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದ ಅವರು, “ನಾಗಾಲೋಟದಲ್ಲಿ ಅಭಿವೃದ್ದಿ ಹೊಂದುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರ್, ಇಂಟರ್‌ನೆಟ್, ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಮುಂತಾದ ವಿಷಯಗಳಲ್ಲಿ ಅಗತ್ಯ ಕೌಶಲಗಳನ್ನು ಗಳಿಸಿಕೊಳ್ಳದಿದ್ದರೆ ಭವಿಷ್ಯದ ದಿನಗಳಲ್ಲಿ ಯುವ ಸಮೂಹ ಉದ್ಯೋಗ ವಂಚಿತವಾಗುವ ಅಪಾಯವಿದೆ. ಸಾಂಘಿಕ ಪ್ರಯತ್ನದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿ ಸಾಧ್ಯ. ಹೀಗಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆ ನಡೆಸಿ, ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೂಳಿಸಿದ ನಮೂನೆಗಳಲ್ಲಿ ಪ್ರತಿ ತಿಂಗಳೂ ತಪ್ಪದೇ ಜಿಲ್ಲಾ ಪಂಚಾಯತಿಗೆ ಮಾಹಿತಿ ಸಲ್ಲಿಸಬೇಕು” ಎಂದರು.
“ಶಾಲಾ ಶಿಕ್ಷಣ ಸಂಸ್ಥೆಗೆ ಸಿವಿಲ್ ಕಾಮಗಾರಿಗಳ ಕಟ್ಟಡದ ಅನೇಕ ಪ್ರಗತಿ ಹಂತದಲ್ಲಿ ಪಿಡಬ್ಲೂಡಿ ಅಧಿಕಾರಿಗಳು ಕಟ್ಟಡದ ಗುಣಮಟ್ಟ ಹಾಗೂ ವಿಶಾಲ ಕೊಠಡಿ ನಿರ್ಮಾಣಕ್ಕೆ ಗಮನಹರಿಸಬೇಕು. ಶಾಲಾ ಕಟ್ಟಡ ಇಲ್ಲದೇ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪಿ ಆರ್ ಇ ಡಿ ಅಧಿಕಾರಿಗಳ ಜೊತೆಗೆ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಸಮನ್ವಯ ನೀಡಲು ಅಗತ್ಯ ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶಾಲೆಗಳಲ್ಲಿ ಲಭ್ಯವಿರುವ ಭೌತಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲವನ್ನು ಅಗತ್ಯತಾನುಸಾರ ಲೆಕ್ಕಿಸಿ ಮರುಹೊಂದಾಣಿಕೆ ಮಾಡುವ ಮೂಲಕ ಮಕ್ಕಳ ಕಲಿಕಾ ಹಕ್ಕುಗಳನ್ನು ಪೋಷಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು” ಎಂದು ಸೂಚಿಸಿದರು.
ಇದನ್ನೂ ಓದಿ: ಧಾರವಾಡ | ಬುದ್ಧನ ಅಷ್ಟಾಂಗ ಮಾರ್ಗದಿಂದ ಪರಿವರ್ತನೆ ಸಾಧ್ಯ: ಡಾ. ಸಂಜೀವ ಕುಲಕರ್ಣಿ
ಸಭೆಯಲ್ಲಿ ಉಪಕಾರ್ಯದರ್ಶಿ ಬಿ ಎಸ್ ಮೂಗನೂರ್‌ಮಠ, ಮುಖ್ಯ ಯೋಜನಾ ಅಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಇದ್ದರು.