ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳಾಗಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ದೇಶಾದ್ಯಂತ ಆಚರಿಸುವುತ್ತಿರುವ ಸ್ವಾತಂತ್ರೋತ್ಸವ ಅರ್ಥಪೂರ್ಣವಾಗಬೇಕಾದರೆ, ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಬಾಲಮಂದಿರ ಮಕ್ಕಳಿಗಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ನಾವೆಲ್ಲ ಮಾಧ್ಯಮದಲ್ಲಿ ಗಮನಿಸಿರುವಂತೆ ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ವಿಚಾರದಲ್ಲಿ ಹಾಗೂ ಅಡುಗೆಯವಳು ಬೇರೆ ಕೋಮಿನವಳು ಎನ್ನುವ ಕಾರಣಕ್ಕೆ ಶಾಲೆ ಮಕ್ಕಳನ್ನು ಬೇರೆ ಕಡೆಗೆ ಟಿ.ಸಿ ಕಿತ್ತುಕೊಂಡು ಹೋಗಿ ಪ್ರವೇಶ ಕೊಡಿಸುತ್ತಿರುವ ಪಾಲಕರ ಮನಸ್ಥಿತಿ ಬದಲಾಗಬೇಕಾಗಿದೆ. 79 ನೇ ಸ್ವಾತಂತ್ರೋತ್ಸವ ಆಚರಿಸುವುತ್ತಿರುವ ನಾವು ಈ ಸಂದರ್ಭದಲ್ಲಿ ಈ ಕುರಿತು ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ” ಎಂದರು.
ಬಾಲಮಂದಿರದ ಮಕ್ಕಳು ಭಕ್ತಿ ಗೀತೆ, ಭಾವಗೀತೆ, ಪಪೇಟ ಶೋ ಹಾಗೂ ಯೋಗ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಗಮನವನ್ನು ಸೆಳೆದರು. ಈ ಸಂದರ್ಭದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಪುಸ್ತಕಗಳನ್ನು ವಿತರಿಸಿದರು.
ಇದನ್ನೂ ಓದಿ: ಧಾರವಾಡ | ಭಾರತದ ಮುಂದಿರುವ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ: ಡಾ. ಬಡಿಗೇರ
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರವೀಂದ್ರ ರತ್ನಾಕರ, ಆಪ್ತಕಾರ್ಯದರ್ಶಿ ಅನ್ನಪೂರ್ಣ ಸಂಗಳದ, ದೀಪಾ ಜಾವೂರ, ಅರ್ಚನಾ ಮಧುಶ್ರೀ, ಮೀನಾಕ್ಷಿ ಮೆಡ್ಲೇರಿ, ಹಂಜಗಿ, ಸುಭಾಷ ಚಂದ್ರಗಿರಿ, ಪದ್ಮಶ್ರೀ ಮೇಟಿ, ಸುವರ್ಣಲತಾ ಮಠದ, ಅರ್ಪಿತಾ, ರಾಜೇಶ್ವರಿ ಹಾಗೂ ಅಕಾಡೆಮಿ ಸಿಬ್ಬಂದಿ ವರ್ಗದವರು ಇದ್ದರು.