ಆರೋಗ್ಯ ಪೂರ್ಣ ಜೀವನಕ್ಕೆ ಕ್ರೀಡೆ ಅತ್ಯಗತ್ಯವಾಗಿದೆ. ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ ತಿಳಿಸಿದರು.
ಧಾರವಾಡ ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮಕ್ಕಳಲ್ಲಿ ಮೇಜರ್ ಧ್ಯಾನ್ ಚಂದ್ ಅವರು ಹುಟ್ಟಿ ಬರಲಿ ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ. ಮಕ್ಕಳಲ್ಲಿರುವ ಕ್ರೀಡಾಸಕ್ತಿ ಗುರುತಿಸಿ ನೀರೆರೆದು ಬೆಳೆಸಿದರೆ ಕ್ರೀಡಾ ಜಗತ್ತಿನಲ್ಲಿ ಅದ್ಭುತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ ಮಾತನಾಡಿ, “ಕ್ರೀಡೆಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಬೇಕಾದ ನಿವೇಶನವನ್ನು ಒದಗಿಸಲು, ಕ್ರೀಡಾಪಟುಗಳಿಗೆ ಅಗತ್ಯ ನೆರವು ಕಲ್ಪಿಸುವ ಎಲ್ಲ ಪ್ರಯತ್ನಗಳನ್ನು ಮಾಡೋಣ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಕೋಟೆ ಮೇಲೆ ಲೋಹದ ಹಕ್ಕಿಗಳ ಚಿತ್ತಾರ; ಕಣ್ತುಂಬಿಕೊಂಡ ಜನ
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ ಟಿ ನಾಥ ಸ್ವಾಮಿ, ಬಾವಿಕಟ್ಟಿ, ಕ್ರೀಡಾ ಇಲಾಖೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಇದ್ದರು.