ಮಕ್ಕಳು ಕವನ ರಚನೆಯಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ತಮ್ಮ ಕವನಗಳನ್ನು ಪ್ರಸ್ತುತಪಡಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಪ್ರಾಚಾರ್ಯ ಶಶಿಧರ್ ತೋಡ್ಕರ್ ಕರೆ ಕೊಟ್ಟರು.
ಹಿರೇಮಲ್ಲೂರು ಶ್ರೀನಿವಾಸನ್ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಅಕಾಡೆಮಿ ಏರ್ಪಡಿಸಿದ್ದ ತ್ರಿಭಾಷಾ ಕವಿಗೋಷ್ಟಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳು ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಣ್ಣಪುಟ್ಟ ಕವನಗಳನ್ನು ರಚಿಸಿ ಪ್ರಸ್ತುತಪಡಿಸಬೇಕು. ಪಾಲಕರು ಮಕ್ಕಳ ವಿವೇಚನೆಗೆ, ಆಸಕ್ತಿಗೆ ತಕ್ಕಂತೆ ಅವರಿಗೆ ಮಾರ್ಗದರ್ಶನ ನೀಡುತ್ತ ಹೋದರೆ ಮಕ್ಕಳ ಯಶಸ್ಸು ಶತಸಿದ್ದ” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿ ಯು ಬೆಳ್ಳಕ್ಕಿ ಮಾತನಾಡಿ, “ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕವನ ರಚಿಸಲು ಪ್ರೋತ್ಸಾಹ ಕೊಟ್ಟು ಹುರಿದುಂಬಿಸಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ಭವ್ಯವಾಗಲು ಸಾಧ್ಯವಾಗುತ್ತದೆ. ಹೆಚ್ಚೆಚ್ಚು ಸಾಹಿತ್ಯಾಸಕ್ತಾರಾಗಲು ಅವರನ್ನು ನಿರಂತರ ಪ್ರೋತ್ಸಾಹಿಸಬೇಕು” ಎಂದರು.
ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಹಿಂದಿ ಭಾಷೆಗೆ ಯು ಎಫ್ ಹುಂಡೆಕಾರ್, ಇಂಗ್ಲಿಷ್ ಭಾಷೆಗೆ ಪ್ರೊ ಇರ್ಷಾದ್ ಹುಲ್ಗೋಲ್ ಹಾಗೂ ಕನ್ನಡ ಭಾಷೆಗೆ ಉಮೇಶ್ ಮನವಳ್ಳಿ ಆಗಮಿಸಿದ್ದರು. ಅಕಾಡೆಮಿಯ ಕಾರ್ಯದರ್ಶಿ ಡಾ. ಎಮ್ ವೈ ಸಾವಂತ್ ಅತಿಥಿಗಳನ್ನು ಸ್ವಾಗತಸಿ ಪರಿಚಯಿಸಿದರು. ಡಾ ಎನ್ ಬಿ ನಾಲತವಾಡ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಆರು ಮಕ್ಕಳಿಗೆ ಅಂಗಾಂಗ ದಾನ; ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಡಾ. ಮಳೆಕರ್, ಡಾ. ಹಿರೇಮಠ, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.
ವಿಜೇತರ ಯಾದಿ: ಕನ್ನಡ ಭಾಷೆಯಲ್ಲಿ: ಸ್ಪೂರ್ತಿ ತಿಮ್ಮಾಪುರ್, ಶ್ರೇಯಾ ಕುರಿಯವರ, ರೇವತಿ ಅಮೀನಭಾವಿ ಹಾಗೂ ಪ್ರಥಮ್ ಕುಲಕರ್ಣಿ. ಇಂಗ್ಲಿಷ್ ಭಾಷೆಯಲ್ಲಿ: ಅನುಪಮಾ ದೇಸಾಯಿ, ಸೃಷ್ಟಿ ಮುತ್ತಣ್ಣವರ್, ಶಮಂತಿಕಾ ಅಗಡಿ ಮತ್ತು ಶ್ರೇಯಾ ಬಾಗೋಡಿ. ಹಿಂದಿ ಭಾಷೆಯಲ್ಲಿ: ದಿಶಾ ಬೆಳವಟ್ಟಿ, ರಮಿತ್ ಕೃಷ್ಣ ಅನ್ವೇಕರ್, ಪ್ರಜ್ವಲ್ ಹಲಕಟ್ಟಿ ಎಸ್ ವಿ ವರ್ಮಾ, ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ್ ಬಹುಮಾನಗಳನ್ನು ಪಡೆದುಕೊಂಡರು.