ನಾವೆಲ್ಲರೂ ಬಾಲ್ಯದಿಂದಲೇ ಕಥೆಗಳನ್ನು ಓದುತ್ತಾ ಬೆಳೆದಿದ್ದೇವೆ. ನಮಗೆ ಕಥೆ ಹೇಳಲು ಅಜ್ಜ. ಅಜ್ಜಿಯರು ಇದ್ದರು. ಇಂದಿನ ಮಕ್ಕಳು ಇಂತಹ ಬಾಲ್ಯದಿಂದ ವಂಚಿತರಾಗಿದ್ದಾರೆ. ಮೊಬೈಲ್, ಟಿವಿ ಗೀಳಿನಲ್ಲಿ ಮಕ್ಕಳ ಬಾಲ್ಯ ಹಾಳಾಗುತ್ತಿದೆ. ಕಥೆಗಳು ಮಕ್ಕಳ ಭಾವನಾ ವಲಯವನ್ನು ವಿಸ್ತರಿಸುತ್ತವೆ ಎಂದು ಧಾರವಾಡ ಜಿಲ್ಲೆಯ ನವಲಗುಂದದ ಮೊರಬ ಗ್ರಾಮದಲ್ಲಿ ನೇಹಾರಾಣಿ ಕಥೆಗಳು ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೀ. ಪಿ. ಜಾಕೋಜಿ ಹೇಳಿದರು.
ನವಲಗುಂದ ತಾಲೂಕು ಹಾಗೂ ಮೊರಬ ಹೋಬಳಿ ಕಸಾಪ ಘಟಕ ವತಿಯಿಂದ ಶಿಕ್ಷಕ ದಂಪತಿ ಶಿವಗಂಗಾ ಹಾಗೂ ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ಮೊರಬ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ಆವರಣದಲ್ಲಿ ನಡೆದ ಕುಮಾರಿ ನೇಹಾ ಲಿಂಗರಾಜ ರಾಮಾಪೂರ ಅವರ ಮೂರನೇ ಕೃತಿ ‘ನೇಹಾರಾಣಿ ಕಥೆಗಳು’ ಪುಸ್ತಕಾವಲೋಕನವನ್ನು ಸಾರಾಂಶೀಕರಿಸಿ ಮಾತನಾಡಿದ ಅವರು, ಕಥೆಗಳು ಮಕ್ಕಳ ಕಲ್ಪನಾಲೋಕವನ್ನು, ಭಾವನಾಲೋಕವನ್ನು ವಿಸ್ತರಿಸುತ್ತವೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಕಥೆಗಳು ಭಾಷೆಯ ಆಳ ಅಗಲಗಳನ್ನು ಪರಿಚಯಿಸಲೂ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲ ಕಥೆಗಾರ್ತಿ ಕುಮಾರಿ ನೇಹಾ ಲಿಂಗರಾಜ ರಾಮಾಪೂರ ಮಾತನಾಡಿ, ಎಲ್ಲ ಮಕ್ಕಳಲ್ಲಿಯೂ ಒಂದೊಂದು ವಿಶೇಷ ಪ್ರತಿಭೆ ಇರುತ್ತದೆ. ಅದರ ಪೋಷಣೆ ಪಾಲಕರಿಂದ ಆಗಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಥೆಗಳ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು, ಮೌಲ್ಯಗಳನ್ನು ಬೆಳೆಸಬಹುದಾಗಿದೆ. ಇದು ಮಕ್ಕಳಿಗೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿಯಲು ಸಹಾಯಕ. ನಮ್ಮ ದೇಶ ಬಹು ಸಂಸ್ಕೃತಿಗಳ ಬೀಡು. ಸಾವಿರಾರು ಜನರು ದೇಶವನ್ನು ಕಟ್ಟಿದ್ದಾರೆ. ಅಂತಹ ಪುಣ್ಯಪುರುಷರ ಚರಿತ್ರೆಗಳನ್ನು ಮಕ್ಕಳಿಗೆ ಕಥೆಗಳ ರೂಪದಲ್ಲಿ ದೊರಕಿಸಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಪಾರ್ವತೆಮ್ಮ ಜಾಲಿಹಾಳ ಉದ್ಘಾಟಿಸಿದರು. ಜಡೀಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ. ಎಸ್. ಕೌಜಲಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಈಶ್ವರ ಜಾಲೀಹಾಳ, ಕಸಾಪ ಗ್ರಾಮ ಘಟಕದ ಅಧ್ಯಕ್ಷ ವಿ.ಎಸ್.ಶಿರಗುಪ್ಪಿ, ಮುಖ್ಯೋಪಾಧ್ಯಾಯ ಸುಚೇತಾ ಹೂಗಾರ, ನವಲಗುಂದ ತಾಲೂಕು ಕಸಾಪ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ಶ್ರೀನಿವಾಸ ನವೀಂದ್ರಕರ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಎಮ್. ಮೆಣಸಿನಕಾಯಿ, ಮೊರಬ ಹೋಬಳಿ ಘಟಕದ ಅಧ್ಯಕ್ಷ ಭೀಮರಾಶಿ ಹೂಗಾರ, ಮಲ್ಲಿಕಾರ್ಜುನ ನಿಡವಣಿ, ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಪೇಜಾವರ ಸ್ವಾಮೀಜಿ ನಡೆ ಸಂವಿಧಾನ ವಿರೋಧಿಯಾಗಿದೆ: ಸಿದಾರ್ಥ ಸಿಂಗೆ
ಕೃತಿಯ ಹದಿನಾರು ಕಥೆಗಳನ್ನು ಹದಿನಾರು ಶಾಲಾ ವಿದ್ಯಾರ್ಥಿಗಳು ವಿಮರ್ಶೆ ಮಾಡಿದರು. ಮಕ್ಕಳಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. ಶಿಕ್ಷಕ ಸಾಹಿತಿ ಡಾ.ಲಿಂಗರಾಜ ರಾಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ. ವೈ. ಪಡಸುಣಗಿ ಸ್ವಾಗತಿಸಿದರು. ಹೋಬಳಿ ಘಟಕ ಗೌರವ ಕಾರ್ಯದರ್ಶಿ ಲಿಂಗರಾಜ ಕಮತ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಮಹಾಂತೇಶ ಇಟಗಿ ವಂದಿಸಿದರು.