ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡ ರೈತ ಸಂಘಗಳ ಒಕ್ಕೂಟದಿಂದ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.
ಸಂಯುಕ್ತ ಕಿಸಾನ್ ಮೋರ್ಚಾ, ರೈತ ಸಂಘ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಎಪಿಎಂಸಿಯಿಂದ ಆರಂಭಗೊಂಡ ರ‍್ಯಾಲಿ ಬಮ್ಮಿಗಟ್ಟಿ ಕ್ರಾಸ್, ಬಸ್ ನಿಲ್ದಾಣ, ಅಂಜನೇಯ ವೃತ್ತದ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ತಲುಪಿತು. ಬಳಿಕ ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
“ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಖಾತ್ರಿ ಕಾನೂನು ಜಾರಿ, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಬರಲು ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ಸೇವೆ ಸಲ್ಲಿಸಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
“ರಾಜ್ಯಾದ್ಯಂತ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸಲು ಸಂಸದರ ನಿಧಿಯನ್ನು ಬಳಸಬೇಕು. ದೇಶದ ರೈತರನ್ನು ಸಂರಕ್ಷಿಸಲು ಭಾರತ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ನಕಲಿ ಕೀಟನಾಶಕ, ಮಾರಾಟಕ್ಕೆ ತಡೆಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು. ರಸಗೊಬ್ಬರ. ಕೀಟನಾಶಕ, ಟ್ರಾಕ್ಟರ್ ಸೇರಿದಂತೆ ಇತರೆ ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ತೆರಿಗೆ ರದ್ದು ಮಾಡಬೇಕು. ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯನ್ನು ಮರು ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
“ಬೆಳೆವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆವಿಮೆ ಜಾರಿಗೆ ತರಬೇಕು. ಬರಗಾಲ, ಅತೀವೃಷ್ಠಿ, ಮಳೆಹಾನಿ, ಪ್ರವಾಹ ಹಾನಿ, ಪ್ರಕೃತಿ ವಿಕೋಪದ ಹಾನಿ, ಬೆಳೆನಷ್ಟ ಪರಿಹಾರದ ಎನ್‌ಡಿಆರ್‌ಎಫ್ ಮಾನದಂಡ ಬದಲಾಯಿಸಬೇಕು. ಕಲಘಟಗಿ ಪಟ್ಟಣದ ಕಾಡಂಚಿನ ಭಾಗದಲ್ಲಿ ವನ್ಯಜೀವಿಗಳಿಂದ ಆಗುವ ಬೆಳೆಹಾನಿ, ಮಾನವಹಾನಿ, ಸಂಘರ್ಷ ತಪ್ಪಿಸಲು ವೈಜ್ಞಾನಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಮಹದಾಯಿ ಯೋಜನೆ ಜಾರಿಗೆ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಕಾಲೇಜು ಹುಡುಗರ ಹೊಡೆದಾಟ : ಪುಂಡಾಟಿಕೆಗೆ ಬೀಳಲಿದೆಯೇ ಬ್ರೇಕ್
ಸೊಬರದಮಠ, ನಿಜಗುಣಿ ಕೆಲಗೇರಿ, ಉಳವಪ್ಪ ಬಳಿಗೇರ, ಪರಶುರಾಮ ಎತ್ತಿನಗುಡ್ಡ, ವಸಂತ ಡಾಕಪ್ಪನವರ, ಬಸವಣ್ಣೆಪ್ಪ ಅದರಗುಂಚಿ, ಮಹೇಶ ಬೆಳಗನಕರ, ಜ್ಯೋತಿಬಾ ಹುಲಕೊಪ್ಪ, ಶಂಕ್ರಪ್ಪ ತಾವರಗೇರಿ, ಬಸವರಾಜ, ಶಿವು ತಡಸ, ಶಂಭು ಬಳಿಗೇರ, ಮಂಜುನಾಥ ಹೊಸಮನಿ ಇದ್ದರು.