ರಾಜ್ಯಪಾಲರ ನಡೆ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, 2020ರಲ್ಲಿ ಬಿಜೆಪಿಯವರು ಮುಡಾ ಹಗರಣ ಮಾಡಿದ್ದಾರೆ. ಸಿದ್ಧರಾಮಯ್ಯನವರು ಬಡವರ ಪರವಾಗಿ ಯೋಜನೆಗಳ ತಂದ ಕಾರಣ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಹೂಡಿರುವ ಬಿಜೆಪಿಗೆ ಸಿಎಂ ಪರ ಇಡೀ ರಾಜ್ಯವೆ ಇದೆ ಎಂಬುದನ್ನು ಅರ್ಥವಾಗಿಸಲು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದರು.
“ಯಾವುದೇ ಕಾರಣಕ್ಕೂ ಸಿದ್ಧರಾಮಯ್ಯನವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿರುವುದು ಖಂಡನೀಯ ಹಾಗೂ ಅವರ ನಾಲಿಗೆ ಮೇಲೆ ಹಿಡಿತವಿರಲಿ” ಎಂದು ಕೆಂಡಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಕಳೆದ ವರ್ಷದ ಬರಗಾಲದಲ್ಲಿ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹಿತ ಪರಿಹಾರ ಸಿಗದ ಸಂದರ್ಭದಲ್ಲಿ ಸಿದ್ಧರಾಮಯ್ಯನವರ ಮೂಲಕ ಜನರಿಗೆ ಬರಗಾಲ ಪಿಹಾರ ಸಿಕ್ಕ ಪರಿಣಾಮ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಯಿತು. ಹೀಗಾಗಿ ಸಿದ್ಧರಾಮಯ್ಯನವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಮತ್ತು ಇವತ್ತಿನವರಗೂ ಬಿಜೆಪಿಯವರು ಮುಡಾ ಹಗರಣದ ಬಗ್ಗೆ ಒಂದೇ ಒಂದು ದಾಖಲೆಯನ್ನೂ ಹೊರತಂದಿಲ್ಲ. ಸಿಎಂ ಪರವಾಗಿ ರಾಜ್ಯದ ಇಡೀ ಶೋಷಿತ ಮತ್ತು ಅಹಿಂದ ವರ್ಗ ಬೆನ್ನೆಲುಬಾಗಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಹೂಡಿದರೂ ನಾವೆಲ್ಲ ಸಿದ್ಧರಾಮಯ್ಯನವರ ಪರ ಎದ್ದು ನಿಲ್ಲುತ್ತೇವೆ” ಎಂದು ಗುಡುಗಿದರು.
ಇದನ್ನು ಓದಿದ್ದೀರಾ? ಉಡುಪಿ | ನಾರಾಯಣ ಗುರುಗಳ ಸಂದೇಶ ಮಾನವ ಕುಲಕ್ಕೆ ಬಹುದೊಡ್ಡ ಕೊಡುಗೆ: ಚಂದ್ರಹಾಸ ಕಾಪು
ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಮುಖಂಡರು, ವಕ್ತಾರರು, ಕಾರ್ಯಕರ್ತರು, ಸಿದ್ಧರಾಮಯ್ಯ ಅಭಿಮಾನಿಗಳು ಭಾಗವಹಿಸಿದ್ದರು.
