ಸಂವಿಧಾನ ಇರದಿದ್ದರೆ ನಾನಿಲ್ಲಿ ನಿಂತು ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಸಂಪೂರ್ಣ ಮೀಸಲಾತಿಯಲ್ಲಿಯೇ ನಾನು ಬಂದಿದ್ದು, ಮೀಸಲಾತಿ ಇಲ್ಲದಿದ್ದರೆ ನಾನು ಯಾರದ್ದೋ ಮನೆಯಲ್ಲಿ ಜೀತ ಮಾಡಿಕೊಂಡು ಇರುತ್ತಿದ್ದೆ. ಆಗ ಮರಿಯಪ್ಪ ಅಂತಿರಲಿಲ್ಲ, ಮರಿಯಾ ಅಂದು ಬಿಡುತ್ತಿದ್ದರು. ಇವತ್ತಿಗೂ ಜಾತಿ ಹೋಗಿಲ್ಲ. ಇನ್ನೂ ಜೀವಂತವಿದೆ ಎಂದು ಧಾರವಾಡ ಜಿಲ್ಲೆಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಪೀಠದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಸ್ಥಾನವನ್ನು ಅಂಬೇಡ್ಕರ್ ಅವರಿಗೆ ಯಾಕೆ ನೀಡಿದ್ದರೆಂದರೆ, ಅವರಿಗೆ ಗೊತ್ತಿತ್ತು ಈ ಕೆಲಸ ನಮ್ಮಿಂದಾಗುವುದಿಲ್ಲವೆಂದು, ಯಾಕೆಂದರೆ ಬಾಬಾಸಾಹೇಬರು ಪಡೆದಿರುವಂತಹ ಪದವಿಗಳನ್ನು ಯಾರೂ ಪಡೆದಿರಲಿಲ್ಲ. ಆಗಿನ ಕಾಲದಲ್ಲಿ ಪದವಿಗಳು ಸುಮ್ಮನೆ ಸಿಗುತ್ತಿರಲಿಲ್ಲ. ಹಾಗಾಗಿ ಸಂವಿಧಾನ ರಚನೆ ಜವಾಬ್ದಾರಿಯನ್ನು ಅಂಬೇಡ್ಕರ್ ಅವರಿಗೆ ವಹಿಸಲಾಗಿತ್ತು” ಎಂದರು.
“ಇಲ್ಲೊಂದು ಬೇರೂರಿಬಿಟ್ಟಿದೆ ಅದೇನೆಂದರೆ, ಅಂಬೇಡ್ಕರ್ ಅಂದರೆ ಎಸ್ಸಿ/ಎಸ್ಟಿಗಳಿಗೆ ಸೀಮಿತ ಅಂತ. ಈಗ ಎಸ್ಟಿಗಳಿಗೂ ಅಲ್ಲ, ಕೇವಲ ಎಸ್ಸಿ ಸಮುದಾಯಕ್ಕೆ ಮಾತ್ರ. ಅದರಲ್ಲೂ ಮುಂದುವರೆದು, ಹೊಲೆಮಾದಿಗರಿಗಷ್ಟೇ ಅಂತ ಹುಟ್ಟುಹಾಕಿ ಬಿಟ್ಟಿದ್ದಾರೆ. ದಲಿತರಿಗೆ ಮಾತ್ರ ಅಂಬೇಡ್ಕರ್ ವಿಚಾರ ಇರಲಿಲ್ಲ. ಹಿಂದೂ ಕೋಡ್ ಬಿಲ್ ಮಾಡಿದ್ದು ಯಾರ ಸಲುವಾಗಿ? ಅದೇನು ದಲಿತರಿಗಾಗಿ ಅಷ್ಟೇ ಇದೆಯಾ, ಅಂಬೇಡ್ಕರ್ ಒಂದು ಸಮುದಾಯಕ್ಕೆ, ವಿಷಯಕ್ಕೆ, ಸಂಕ್ಷಿಪ್ತವಾಗಿ ಯಾವುದೇ ಒಂದು ವಿಷಯಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ” ಎಂದರು.
“ಮೀಸಲಾತಿಯನ್ನು ಎಲ್ಲರೂ ಪಡೆಯುತ್ತಿದ್ದಾರೆ. ಅದರಲ್ಲೂ ಹೊಲೆಮಾದಿಗರಿಗಷ್ಟೇ ಮೀಸಲಾತಿ ಇದೆ ಅಂತ ಹೇಳುತ್ತಾರೆ. ಎಸ್ಟಿ, ಒಬಿಸಿಗಳು ಸೇರಿದಂತೆ ಬ್ರಾಹ್ಮಣರಿಗೂ ಕೂಡ ಸಂವಿಧಾನದಡಿಯಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಿದ್ದೇವೆಂಬ ಪರಿಕಲ್ಪನೆ ಇಲ್ಲ. ಮೀಸಲಾತಿ ಅಂದರೆ ಎಸ್ಸಿಗಳಿಗೆ ಮಾತ್ರ ಎನ್ನುವಂತಹ ಅಭಿಪ್ರಾಯವಿದೆ. ಇಂತಹ ತಪ್ಪು ತಿಳುವಳಿಕೆ ಗೊತ್ತಿರುವವರೇ ಹುಟ್ಟು ಹಾಕಿಬಿಟ್ಟಿದ್ದಾರೆ. ಜನಸಾಮಾನ್ಯರು ಹುಟ್ಟುಹಾಕಿರುವಂತಹ ತಪ್ಪುಗಳಲ್ಲ ಇವು ಎನ್ನುತ್ತಾ, ಇಂದಿನ ದಿನ ಸಂವಿಧಾನ ದಿನವನ್ನು ಘೋಷಿಸಿದವರಿಗೆ ನಾವು ಧನ್ಯವಾದಗಳು ಹೇಳಬೇಕಿದೆ” ಎಂದರು.
ಕಲ್ಯಾಣ ರಾಷ್ಟ್ರದ ಕಲ್ಪನೆ
“ಇತ್ತೀಚಿಗೆ ಬಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು, ತುಂಬಾ ಜನ ತೆಗಳುತ್ತಾರೆ. ಕೋಟ್ಯಾಧೀಶರು ತೆರಿಗೆ ಕಟ್ಟದೆ, ಸಾಲ ಮಾಡಿ ಎಷ್ಟೋ ಮಂದಿ ದೇಶಬಿಟ್ಟು ಹೊರಗೆ ಹೋಗಿಬಿಟ್ಟರು. ಅದೆಲ್ಲ ಸಾಲ ಸಾರ್ವಜನಿಕ ಹಣ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಸಾಲ ಮಾಡಿ ಓಡಿ ಹೋಗಿರುವಂತಹ ಒಬ್ಬನನ್ನು ಸೇರಿಸಿದರೆ ಒಂದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಪೂರ್ಣವಾಗುತ್ತದೆ. ಒಬ್ಬೊಬ್ಬರ ಹತ್ತಿರ ಅಷ್ಟಷ್ಟು ಹಣ ಇದೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಸರ್ಕಾರದ ಜವಾಬ್ದಾರಿ ಸರ್ಕಾರವು ತನ್ನ ರಾಜ್ಯದ ಕಟ್ಟಕಡೆಯ ವ್ಯಕ್ತಿಯ ಸರ್ವಾಂಗೀಣವನ್ನು ಮಾಡುವಂತಹದ್ದು ಕರ್ತವ್ಯ ಹಾಗೂ ಆದ್ಯತೆ” ಎಂದರು.
“ಬಡವರಿಗೆ ಏನಾದರೂ ಯೋಜನೆಗಳು ರೂಪುಗೊಳ್ಳುತ್ತವೆ ಅಂದರೆ ಅದಕ್ಕೂ ಬಹಳಷ್ಟು ಜನ ಕಲ್ಲು ಹಾಕುವವರು ಹಾಗೂ ಅಪಾರ್ಥ ಕೊಡುವಂತಹದ್ದನ್ನು ಮಾತಾಡುವವರು ಇರುತ್ತಾರೆ. ಅದೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಂತಹವರನ್ನು ಗಮನಕ್ಕೆ ತೆಗೆದುಕೊಳ್ಳದೇ, ಅವರ ಬಗ್ಗೆ ಮಾತನಾಡದೇ ಅಪಹಾಸ್ಯ ಮಾಡುವವರನ್ನು ನಿರ್ಲಕ್ಷಿಸುವುದೊಂದೇ ದಾರಿ. ಯಾಕೆಂದರೆ ಶ್ರೀಮಂತರು ಲೂಟಿ ಮಾಡಿ ಹೋಗುತ್ತಾರೆ. ʼರಾಷ್ಟ್ರದ ಸಂಪತ್ತು, ಜನರ ಸಂಪತ್ತುʼ ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನವನ್ನು ದೂಷಣೆ ಮಾಡಲು ಯಾವ ಅಂಶಗಳೂ ಅದರಲ್ಲಿ ಇಲ್ಲವೇ ಇಲ್ಲ. ಸಂವಿಧಾನ ಬದಲಾವಣೆಗೆ ಮುಂದಾಗುತ್ತೇವೆಂದರೆ ಅದು ಅವರ ದುಷ್ಕೃತ್ಯಕ್ಕೆ ಒಂದು ಉದಾಹರಣೆ” ಎಂದು ಆತಂಕ ವ್ಯಕ್ತಪಡಿಸಿದರು.
“ಎಷ್ಟೋ ರಾಜ-ಮಹಾರಾಜರು ಆಳಿದು ಹೋದರು. ಅವರ ಆಡಳಿತದಲ್ಲಿ ಯಾವ ಜಾತಿಯಾದರೂ ನಾವೆಲ್ಲರೂ ಗುಲಾಮರೆ. ದೊಡ್ಡ ಜಾತಿ ಇರಲಿ, ಸಣ್ಣ ಜಾತಿ ಇರಲಿ. ಈ ಸಂವಿಧಾನಕ್ಕೆ ಪದಚ್ಯುತಿಯ ಸಮಯ ಬಂದರೆ ಅದು ನಮ್ಮ ನಿಮ್ಮೆಲ್ಲರ ಶವಶಾಸನ. ಸಂವಿಧಾನದ ಪದಚ್ಯುತಿಯ ವಿಚಾರ ಬಂದಾಗ ನೀವೆಲ್ಲರೂ ಜಾಗೃತವಾಗಿರಬೇಕು. ಇಲ್ಲಿ ಸಾವಿರಾರು ಭಾಷೆ, ಆಚರಣೆ, ಸಂಸ್ಕೃತಿಗಳಿವೆ. ಇದೆಲ್ಲವನ್ನೂ ನಾವು ಗೌರವಿಸಬೇಕು. ಒಂದು ಜಾತಿಯ ಜನಸಂಖ್ಯೆ ಹೆಚ್ಚಿದೆ ಎಂದು ಉಳಿದವರ ಮೇಲೆ ದೌರ್ಜನ್ಯ ಮಾಡುವುದು ಹಾಗೂ ವಿಶೇಷ ಸವಲತ್ತು ಇದೆ ಎಂದ ಮಾತ್ರಕ್ಕೆ ಮತ್ತೊಬ್ಬರ ಮೇಲೆ ದೌರ್ಜನ್ಯ ಮಾಡುವುದು ಯಾವುದೇ ಕಾರಣಕ್ಕೂ ಆಗಬಾರದು” ಎಂದು ಮನವರಿಕೆ ಮಾಡಿದರು.
“ಕಾಲಕಾಲಕ್ಕೆ ಚುನಾವಣೆ ನಡೆಸುವುದಂತೂ ಎಲ್ಲರಿಗೂ ಗೊತ್ತು. ಈಗೆಲ್ಲ ಎಷ್ಟೆಷ್ಟು ಅಧ್ವಾನ ಆಗಿವೆ ಅಂದರೆ, ಅದನ್ನು ಮಾತನಾಡಲೂ ಕೂಡ ಅಸಹ್ಯವಾಗುತ್ತದೆ. ಯಾಕೆಂದರೆ ಚುನಾವಣಾ ಆಯೋಗ ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ಬಿಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪೇ ಹೊರತು ಸಂವಿಧಾನದ ತಪ್ಪಲ್ಲವೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ತಿಳಿಸಿದರು.
“ಭಾರತದ ಸಂವಿಧಾನವೆಂದರೆ ನಾವು ಬಾಬಾಸಾಹೇಬರನ್ನು ಹೊರತುಪಡಿಸಿ ನೋಡುವುದಕ್ಕೆ ಸಾಧ್ಯವೇ ಇಲ್ಲ. ಅವರ ಜೀವನ, ತುಳಿತಕ್ಕೆ ಒಳಗಾಗಿದ್ದ ಜನರಿಗೆ ಅವಕಾಶಗಳನ್ನು ಒದಗಿಸಿಕೊಡಲು ಅವರು ಪಟ್ಟ ಪರಿಶ್ರಮ ಅಗಾಧವಾದದ್ದು. ಇವತ್ತಿನ ಸ್ಥಿತಿಯಲ್ಲಿ ಸಂವಿಧಾನಕ್ಕೆ ಬಂದೊದಗಿದ ಆಘಾತಗಳು ಅಥವಾ ಅಪಹಾಸ್ಯಗಳನ್ನು ಪುನರಾವಲೋಕನ ಮಾಡಿ ಅಪವಾದಗಳನ್ನು ಬಡಿದೋಡಿಸಲು ಇದೊಂದು ನಮಗೆ ಸುಸಂದರ್ಭ. ನಾವು ಸಂವಿಧಾನದ ಋಣ, ಫಲ ತಿನ್ನುತ್ತಿದ್ದೇವೆ. ಅಂದರೆ ಅದರ ಅಂಶಗಳನ್ನು ಜನರಿಗೆ ತಿಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಒತ್ತಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ
ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಡಾ. ಎನ್ ವೈ ಮಟ್ಟಿಹಾಳ, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಎಸ್ ನಾಟೇಕರ್ ಸೇರಿದಂತೆ ಇತರರು ಇದ್ದರು.
ವರದಿ : ಶಿವರಾಜ್ ಮೋತಿ