ನಗರದ ಹುರಕಡ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಿಸಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಧುನಿಕ ಯುಗದಲ್ಲಿದ್ದೇವೆ. ಇದೊಂದು ಗಂಭೀರ ವಿಷಯ. ಯಾರು ಜನಿವಾರ ಕತ್ತರಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈಗಾಗಲೇ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದರು.
ಜನಿವಾರ ಕತ್ತರಿಸಿದ ವಿಷಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ ಎನ್ನುವ ಶಾಸಕ ಅರವಿಂದ ಬೆಲ್ಲದ್ ಆರೋಪಕ್ಕೆ ಉತ್ತರ ನೀಡುತ್ತಾ, ಅರವಿಂದ ಬೆಲ್ಲದ್ ಅವರೇ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಗ್ಗೆ ಪ್ರತಿಕ್ರಿಯೆ ಕೇಳಲಿ. ಖಂಡಿತಾ ಸಿಎಂ ಪ್ರತಿಕ್ರಿಯೆ ನೀಡುತ್ತಾರೆ ಎಂದರು.