ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡಣೆ ವಿರೋಧಿಸಿ ಡಿಸೆಂಬರ್ 17 ರಂದು ಭೋವಿ ವಡ್ಡರ, ಬಂಜಾರ, ಲಮಾಣಿ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟ ವತಿಯಿಂದ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕುವುದಾಗಿ ಧಾರವಾಡದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ವೇದಿಕೆಯ ರಾಜ್ಯಾಧ್ಯಕ್ಷ ವೈ. ಕೋಟ್ರೇಶ್ ಹೇಳಿದರು.
ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕಣ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೇ ನೆಪವಾಗಿರಿಸಿಕೊಂಡು ರಾಜ್ಯ ಸರ್ಕಾರ ವಿಂಗಡಿಸಲು ಮುಂದಾಗಿರುವುದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರವಾಗಿದೆ. ರಾಜ್ಯದಲ್ಲಿ ಭೋವಿ ಸಮುದಾಯ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಕೊರಮ-ಕೊರಚ ಸಮುದಾಯಗಳು ದಾರಿದ್ರ್ಯದಲ್ಲೇ ಬದುಕುತ್ತಿವೆ. ಬಂಜಾರ-ಲಂಬಾಣಿ ಸಮುದಾಯಗಳು ಈಗಲೂ ಅಲೆಮಾರಿಗಳಂತೆ ಬದುಕು ನಡೆಸುತ್ತಿದ್ದಾರೆ.
ನ್ಯಾ. ಎ.ಜೆ.ಸದಾಶಿವ ನೀಡಿರುವ ಆಯೋಗದ ವರದಿಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು, ಮೀಸಲಾತಿ ವರ್ಗೀಕರಣಕ್ಕೆ ಮುಂದಾಗುವ ಸಂಶಯ ದಟ್ಟವಾಗಿದೆ. ಇಂತಹ ದುಸ್ಸಾಹಸಕ್ಕೆ ರಾಜ್ಯ ಸರ್ಕಾರ ಕೈಹಾಕಿದರೆ ಮೀಸಲಾತಿಯಿಂದ ಭೋವಿ ಲಂಬಾಣಿ ಕೊರಮ, ಕೊರಚ ಜನಾಂಗಗಳು ವಂಚಿತಗೊಂಡು ಗುಲಾಮಗಿರಿಯ ಬದುಕು ನಡೆಸಬೇಕಾಗುತ್ತದೆ ಮತ್ತು ನಮ್ಮ ಮಕ್ಕಳ ಪಾಲಿಗೆ ಒಳಮೀಸಲಾತಿ ವರ್ಗೀಕರಣ ಮರಣ ಶಾಸನವಾಗಿ ಪರಿಣಮಿಸಲಿದೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ವಿದ್ಯಾರ್ಥಿಗಳು ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡಿ: ಕುಲಸಚಿವ ಡಾ. ಎ.ಚನ್ನಪ್ಪ
ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಹಿರೇಮನಿ, ಮುತ್ತುರಾಜ ಮಾಕಡವಾಲೆ, ಕೊರಚ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ.ವೆಂಕಟೇಶ, ರಾಜ್ ಮಹಿಳಾ ಅಧ್ಯಕ್ಷ ಸುಶೀಲಮ್ಮ, ಸಮಾಜದ ಮುಖಂಡ ಮಲೇಶ ಮುನವಳ್ಳಿ, ಭೀಮಸಿ ನೆಮಿಕಲ್ಲ, ಕಾಶಪ್ಪ ಹಿರೇಮನಿ, ತಿಮ್ಮಣ್ಣಾ ಹಿರೇಮನಿ, ಮಂಜುನಾಥ ಹಳ್ಯಾಳ ಮತ್ತು ಶ್ರೀನಿವಾಸ ಅವರೋಳ್ಳಿ ಸೇರಿದಂತೆ ಭೋವಿ ಯುವವೇದಿಕೆ, ಬಂಜಾರ ಸಮಾಜ, ಕೊರಮ-ಕೊರಚ ಸಮಾಜದ ಸಂಘಟನೆಗಳ ಪದಾಧಿಕಾರಿಗಳು ಇದ್ದರು.