ಕನಕಪುರ ತಾಲೂಕಿನ ದಲಿತ ಯುವಕ ಅನೀಶ್ ಮೇಲೆ ನಡೆದ ದೌರ್ಜನ್ಯಕ್ಕೆ ಸೂಕ್ತ ನ್ಯಾಯ ಒದಗಿಸಿ ಆರೋಪಿಗಳಿಗೆ ಗಡಿಪಾರು ಶಿಕ್ಷೆ ಒದಗಿಸಬೇಕು ಎಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯು ಶುಕ್ರವಾರ ಸಂಶಿ ಗ್ರಾಮದ ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಂತರ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ಶಿವಪ್ಪ ಮುಡ್ಸಿಬಣ, “ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ಪರಿಶಿಷ್ಠರ ಎನ್.ಕೆ. ಕಾಲೋನಿಗೆ ನುಗ್ಗಿ ಅನೀಶ್ ಎಂಬ ದಲಿತ ಯುವಕನ ಕೈ ಕತ್ತರಿಸಿ ದೈಹಿಕ ದೌರ್ಜನ್ಯ ಎಸಗಿದ್ದಾರೆ. ಒಕ್ಕಲಿಗ ಸಮಾಜದ ಹರ್ಷ ಅಲಿಯಾಸ್ ಕೈಮ ಕರುಣೇಶ, ರಾಹುಲ್, ಶಿವ, ಸುಬ್ಬ, ದರ್ಶನ ಇವರನ್ನು ಕೂಡಲೇ ಗಡಿಪಾರು ಮಾಡದಿದ್ದಲ್ಲಿ ದಲಿತ ಸಂಘರ್ಷಣಾ ಸಮಿತಿಯಿಂದ ಹೋರಾಟ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ದಲಿತರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನಿರಂತರವಾಗಿ ಮೇಲ್ವರ್ಗದವರಿಂದ ದಲಿತ ತುಳಿತಕ್ಕೆ ಒಳಗಾಗುತ್ತಲೇ ಇದ್ದಾರೆ. ಇನ್ನಾದರೂ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಮಾಡಿದ ಸಮಾಜದವರು ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ದಲಿತ ಯುವಕನಿಗೆ ಸೂಕ್ತ ಪರಿಹಾರ ನೀಡಬೇಕು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ತುಮಕೂರು | ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ‘ಡಿ’ ಗ್ರೂಪ್ ನೌಕರರೇ ಹಾಸ್ಟೆಲ್ ವಾರ್ಡನ್‌ಗಳು!
ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಪ್ಪ ಮುಡ್ಸಿಬಣ, ಪರಮೇಶ ರವಡೂರ, ಕುಮಾರ್ ಬೆಳವಡಿ, ಶ್ರೀಧರ ಕೋಟಿ, ಮಲ್ಲಿಕಾರ್ಜುನ ಕೋಟಿ, ಮೈಲಾರಿ ಕೋಟಿ, ಮಹಾಂತೇಶ ಕಲ್ಲಾರಿ, ಈರಣ್ಣ ಕಾಳಿ ಉಪಸ್ಥಿತರಿದ್ದರು.
